ಬೆಳಗಾವಿ:ವರ್ಷದ ಕೊನೆಯ ಹಬ್ಬ ಕ್ರಿಸ್ಮಸ್ ಆಚರಣೆಗೆ ಕುಂದಾನಗರಿ ಬೆಳಗಾವಿ ಸನ್ನದ್ಧವಾಗಿದ್ದು, ಇಲ್ಲಿನ ಚರ್ಚ್‌ಗಳನ್ನು ಆಕರ್ಷಕವಾಗಿ ಶೃಂಗರಿಸಲಾಗಿದೆ. ಕ್ರೈಸ್ತ ಸಮುದಾಯದವರ ಮನೆಗಳ ಮುಂದೆ ನಕ್ಷತ್ರ ಬುಟ್ಟಿಗಳು, ಬಾಲ ಯೇಸುವಿಗೆ ತಯಾರಿಸಿರುವ ಪುಟ್ಟ ಗೋದಲಿಗಳು, ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಕ್ರಿಸ್ಮಸ್ ಟ್ರಿ ಆಕರ್ಷಿಸುತ್ತಿವೆ.
ಚರ್ಚ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳು: ಡಿ.25ರ ಸೋಮವಾರ ಕ್ರಿಸ್ಮಸ್ ಹಬ್ಬವಿದ್ದರೂ ಭಾನುವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಬಿಷಪ್ ಸಂದೇಶ ನೀಡಲಿದ್ದಾರೆ. ಬಳಿಕ ಸಿಹಿತಿನಿಸುಗಳನ್ನು ಹಂಚಲಿದ್ದಾರೆ. ನಾಳೆ ಬೆಳಿಗ್ಗಿನ ಜಾವದವರೆಗೂ ಸಂತೋಷ ಕೂಟದ ವಿಶೇಷ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ.
ಯೇಸು ಕ್ರಿಸ್ತನ ಗೋದಲಿಗಳು: ನಗರದ ಫಾತಿಮಾ ಕೆಥೆಡ್ರಲ್ ಚರ್ಚ್, ಐಸಿ ಚರ್ಚ್, ಸೇಂಟ್ ಅಂಥೋನಿ ಚರ್ಚ್, ಮೌಂಟ್ ಕಾರ್ಮಲ್ ಚರ್ಚ್, ಸೇಂಟ್ ಮೇರಿ ಚರ್ಚ್, ಮೆಥೋಡಿಸ್ಟ್ ಚರ್ಚ್ ಸೇರಿದಂತೆ ಜಿಲ್ಲಾದ್ಯಂತ ಇರುವ 100ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಅಳವಡಿಸಿರುವ ನಕ್ಷತ್ರ ಬುಟ್ಟಿಗಳು ಆಕರ್ಷಕವಾಗಿವೆ. ಯೇಸು ಕ್ರಿಸ್ತನ ಜನನದ ಸನ್ನಿವೇಶವನ್ನು ಬಿಂಬಿಸುವ ಗೋದಲಿಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ.