ಬೆಳಗಾವಿ: ಮನೆಯಲ್ಲಿ ಪತ್ನಿ ಕಾಟವೆಂದು ಲಕ್ಷಾಂತರ ರೂಪಾಯಿ ಹಣದೊಂದಿಗೆ ಗೋವಾ ಪ್ರವಾಸ ಹೊರಟ ಉದ್ಯಮಿಯನ್ನು ಬೆಳಗಾವಿ ಪೊಲೀಸರು ಮಾರ್ಗಮಧ್ಯೆ ತಡೆದಿದ್ದು, ವಿಚಾರಣೆ ಎದುರಿಸುವಂತಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋದರೆ ಸೂಕ್ತ ದಾಖಲಾತಿ ನೀಡಬೇಕು. ಇಲ್ಲದಿದ್ದರೆ, ಅಧಿಕಾರಿಗಳು ಹಣ ವಶಕ್ಕೆ ಪಡೆದುಕೊಳ್ಳುತ್ತಾರೆ. ಇದರಂತೆ, ಮುಂಬೈ ಉದ್ಯಮಿಯೊಬ್ಬರು 26 ಲಕ್ಷ ರೂಪಾಯಿ ಹಣದೊಂದಿಗೆ ಸಂಚರಿಸುತ್ತಿದ್ದಾಗ ಬೆಳಗಾವಿ ಪೊಲೀಸರು ನಗದು ಸಮೇತ ವಶಕ್ಕೆ ಪಡೆದಿದ್ದಾರೆ.
ಮುಂಬೈ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದ ಉದ್ಯಮಿ ಆನ್‌ಲೈನ್ ಮ್ಯಾಪ್ ಹಾಕಿಕೊಂಡು ಸಂಚಾರ ಆರಂಭಿಸಿದ್ದರು. ಆದರೆ, ಮ್ಯಾಪ್ ತಪ್ಪಾಗಿ ರಸ್ತೆಮಾರ್ಗ ತೋರಿಸಿದ್ದು, ಬೆಳಗಾವಿ ನಗರಕ್ಕೆ ಬಂದಿದ್ದಾರೆ. ನಗರದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ 26 ಲಕ್ಷ ರೂಪಾಯಿ ನಗದು ಸಿಕ್ಕಿದ್ದು, ಇಷ್ಟೊಂದು ಹಣದೊಂದಿಗೆ ಎಲ್ಲಿಗೆ ಸಂಚಾರ ಮಾಡುತ್ತಿದ್ದೀರಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಕ್ತಿ, ನಾನು ಮುಂಬೈ ಮೂಲದ ಉದ್ಯಮಿ. ಮನೆಯಲ್ಲಿ ಹೆಂಡತಿ ಕಾಟ ತಾಳಲಾರದೆ ಗೋವಾಗೆ ಹೊರಟಿದ್ದೆ. ಆನ್‌ಲೈನ್ ಮ್ಯಾಪ್ ಹಾಕಿಕೊಂಡು ಕಾರು ಓಡಿಸುತ್ತಿದ್ದೆ. ಆದರೆ, ಬೆಳಗಾವಿ ನಗರಕ್ಕೆ ಇದು ಕರೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಹಣದ ಮೂಲದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಉದ್ಯಮಿಯ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.