ಬೆಳಗಾವಿ: ರಾಜ್ಯ ರಸ್ತೆ ಸಾರಿಗೆ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ಸಾರಿಗೆ ಸೇವೆಯನ್ನು ಲಾಭದಾಯಕವಾಗಿ ಮಾಡಲು ಕ್ರಮ ವಹಿಸಲಾಗುವುದು ಮತ್ತು ಖಾಸಗಿ ಸಾರಿಗೆಗೆ ಪೈಪೋಟಿ ನೀಡುವಂತೆ ಸಾರಿಗೆ ಸಂಸ್ಥೆಗಳಲ್ಲಿ ಸುಧಾರಣೆ ತರಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೆಳಗಾವಿ ನೂತನ ಕೇಂದ್ರ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಸುಧಾರಣೆಗಾಗಿ ನಿವೃತ್ತ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ವರದಿ ಕೊಟ್ಟಿದೆ. ವರದಿಯ ಅನುಷ್ಠಾನದ ಜವಾಬ್ದಾರಿಯನ್ನು ಸಹ ಅವರಿಗೆ ನೀಡಲಾಗಿದೆ. ಸಾರಿಗೆ ಸೇವೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ರಾಜ್ಯದ ರಸ್ತೆ ಸಾರಿಗೆಯ ವಿವಿಧ ಸಂಸ್ಥೆ, ಬಿಎಂಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ಸೇವೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಕಾಣಲಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಹೊಸ ಯೋಜನೆ ಘೊಷಣೆ ಮಾಡಲು ಚರ್ಚಿಸಲಾಗುವುದು. ವಾಯುವ್ಯ ಸಾರಿಗೆ ಬೆಳ್ಳಿ ಹಬ್ಬ ಆಚರಿಸಲಿದ್ದು, ಬರುವ ಬಜೆಟ್‌ನಲ್ಲಿ 500 ಬಸ್ ಖರೀದಿಗೆ ಹಾಗೂ 500 ಸಿಬ್ಬಂದಿ ನೇಮಕ ಮಾಡಲು ಅನುಮತಿ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.
2 ವರ್ಷದಲ್ಲಿ 2000 ಕೋಟಿ ರೂ. ಆರ್ಥಿಕ ನೆರವು: ಕರ್ನಾಟಕ ಸಾರಿಗೆ ಸೇವೆ ಒಳ್ಳೆಯ ಸೇವೆ ಕೊಡುತ್ತಾ ಬಂದಿದೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಗೆ ಆರ್ಥಿಕ ನಷ್ಟವುಂಟಾಗಿದೆ. ಸರ್ಕಾರವು 2 ವರ್ಷದಲ್ಲಿ ಸಾರಿಗೆ ಸಂಸ್ಥೆಗೆ 2000 ಕೋಟಿ ಆರ್ಥಿಕ ನೆರವು ನೀಡಿದೆ. ಸಾರಿಗೆಯ ವಿವಿಧ ಸಂಸ್ಥೆಗಳಿಗೆ ಬಸ್ ಖರೀದಿಗೆ ಅನುದಾನ ಮತ್ತು ಸಾಲ ಪಡೆಯಲು ಅನುಮತಿ ನೀಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಜನರಿಗೆ , ಬಡ ಮಕ್ಕಳಿಗೆ ಸೇವೆ ಸಲ್ಲಿಸುತ್ತಿವೆ. ಕಾಲಕಾಲಕ್ಕೆ ಸರ್ಕಾರ ಈ ಸಂಸ್ಥೆಗಳಿಗೆ ಸಹಾಯ ಒದಗಿಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಶೀಘ್ರವೇ ವಿಶ್ವ ಕನ್ನಡ ಸಮ್ಮೇಳನ.. ರಾಜಕೀಯಕ್ಕಾಗಿ ಗಡಿ ಸಮಸ್ಯೆ ಸೃಷ್ಟಿ: ಮಹಾರಾಷ್ಟ್ರಕ್ಕೆ ಸಿಎಂ ಬೊಮ್ಮಾಯಿ ಟಾಂಗ್