ಬೆಳಗಾವಿ: ಎರಡು ಸಲ ಸೂಪರ್ ಸೀಡ್ ಆಗುವ ಮೂಲಕ ವಿವಾದದಿಂದಲೇ ರಾಜ್ಯದ ಗಮನ ಸೆಳೆದಿರುವ ಬೆಳಗಾವಿಯ ಮಹಾನಗರ ಪಾಲಿಕೆಗೆ ಸೋಮವಾರವಷ್ಟೇ ಚುನಾವಣೆ ಘೋಷಣೆ ಆಗಿದೆ. ಚುನಾವಣೆ ಆಯೋಗದ ಈ ದಿಢೀರ್ ನಿರ್ಧಾರ ಅಭ್ಯರ್ಥಿಗಳಲ್ಲಿ ಅಚ್ಚರಿ ಜೊತೆಗೆ ಶಾಕ್ ಕೂಡ ಆಗಿದೆ. ಈವರೆಗೆ ಒಮ್ಮೆಯೂ ಬಹುಮತ ಸಾಧಿಸದ ಕನ್ನಡ ಭಾಷಿಕರು ಈ ಬಾರಿಯಾದರೂ ಗದ್ದುಗೆ ಏರುತ್ತಾರಾ? ನಾಡದ್ರೋಹಿ ಎಂಇಎಸ್ ಮಣಿಸಲು ಈ ಸಲವಾದರೂ ಸ್ಥಳೀಯ ರಾಜಕೀಯ ನಾಯಕರು ಒಂದಾಗುವರೆ ಎಂಬುವುದೇ ಸದ್ಯದ ಕುತೂಹಲ.
ಎರಡೂವರೆ ವರ್ಷಗಳ ಕಾಲ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಮೂಲಕ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ. ಸ್ಮಾರ್ಟ್‍ಸಿಟಿ, ಅಮೃತ್ ಸಿಟಿಯಂಥ ಮಹತ್ವದ ಯೋಜನೆಗಳು ಪಾಲಿಕೆ ಸದಸ್ಯರಿಲ್ಲದೇ ಅಧಿಕಾರಿಗಳೇ ಜಾರಿಗೊಳಿಸುತ್ತಿದ್ದಾರೆ. ಹೀಗಾಗಿ, ನಗರದಲ್ಲಿ ಎಲ್ಲ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಹೀಗಾಗಿ, ಜನರು ಕೂಡ ಹೈರಾಣಾಗಿದ್ದಾರೆ.
ಭಾಷಾಧಾರಿತವೋ? ಪಕ್ಷಾಧಾರಿತವೋ?
ರಾಜ್ಯದ ಇತರ 8 ಮಹಾನಗರ ಪಾಲಿಕೆಗೆ ಹೋಲಿಸಿದರೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ತುಸು ಭಿನ್ನ. ಎಲ್ಲೆಡೆ ಪಕ್ಷಾಧಾರಿತವಾಗಿ ಚುನಾವಣೆ ನಡೆದರೆ ಬೆಳಗಾವಿಯಲ್ಲಿ ಮಾತ್ರ ಭಾಷಾಧಾರಿತವಾಗಿ ಚುನಾವಣೆ ನಡೆದುಕೊಂಡು ಬಂದಿವೆ. ಎಂಇಎಸ್-ಶಿವಸೇನೆ ಒಂದೆಡೆ ಆದರೆ ಕನ್ನಡ ಸೇರಿ ಇನ್ನುಳಿದ ಭಾಷೆಯ ಸದಸ್ಯರು ಒಂದಾಗಿ ಚುನಾವಣೆ ಎದುರಿಸುತ್ತಾರೆ.
ಈವರೆಗೆ ಒಮ್ಮೆಯೂ ಇಲ್ಲಿ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆದಿಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಒಮ್ಮೆಯೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಎಂಇಎಸ್ ಮಣಿಸಲು ಮೂರು ಪಕ್ಷಗಳು ಕನ್ನಡ ಭಾಷಿಕ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿವೆ.
ಈ ಬಾರಿ ಪಕ್ಷಾಧಾರಿತವಾಗಿ ಚುನಾವಣೆ ನಡೆಸಲು ಕಾಂಗ್ರೆಸ್ ಹಾಗೂ ಬಿಜೆಪಿ ನಿರ್ಧರಿಸಿವೆ. ತಕ್ಷಣವೇ ಚುನಾವಣೆ ಘೋಷಣೆ ಆಗಿರುವುದರಿಂದ ರಾಜಕೀಯ ಪಕ್ಷಗಳು ಕೂಡ ಇನ್ನೂ ತಯಾರಿ ಮಾಡಿಕೊಂಡಿಲ್ಲ. ದಿಢೀರ್ ಚುನಾವಣೆ ಘೋಷಣೆಯಿಂದ ಅಭ್ಯರ್ಥಿಗಳ ಜೊತೆಗೆ ರಾಜಕೀಯ ಪಕ್ಷಗಳು ಸಹ ಶಾಕ್‍ಗೆ ಒಳಗಾಗಿವೆ.