ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಭವದ ವಿಚಾರವಾಗಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಮತ್ತು ಕಾಂಗ್ರೆಸ್ ಶಾಸಕ ರಾಜು ಸೇಠ್ ನಡುವೆ ಪರಸ್ಪರ ವಾಗ್ದಾಳಿ ನಡೆಯಿತು. ಮರಾಠಿ ಭಾಷೆಯಲ್ಲಿಯೇ ನೊಟೀಸ್ ನೀಡುವಂತೆ ಎಂಇಎಸ್ ನಗರಸೇವಕರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವರ್ಗಾವಣೆ ಸೇರಿ ಕೆಲ ಪ್ರಮುಖ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಯಿತು.
ಪಾಲಿಕೆ ಸಭೆಯ ಆರಂಭದಲ್ಲಿ ನಾಡಗೀತೆ ಮುಗಿದ ಬಳಿಕ ಎಂಇಎಸ್ನ ಮೂವರು ನಗರ ಸೇವಕರು ಮರಾಠಿ ಭಾಷೆಯಲ್ಲಿ ನೊಟೀಸ್ ಸೇರಿದಂತೆ ಇತರ ಕಾಗದಪತ್ರಗಳನ್ನು ಕೊಡುವಂತೆ ಆಗ್ರಹಿಸಿ ಧರಣಿಗೆ ಮುಂದಾದರು. ಇದು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಗರ ಸೇವಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಶಾಸಕ ಅಭಯ್ ಪಾಟೀಲ್ ಮಾತನಾಡಿ, "ಶಾಸಕ ರಾಜು ಸೇಠ್ಗೆ ಅನುಭವ ಕೊರತೆ" ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜು ಸೇಠ್, ಆಕ್ರೋಶ ಹೊರಹಾಕುತ್ತಾ, "ಯಾರ ಅನುಭವ ಏನೆಂಬುದು ತೀರ್ಮಾನವಾಗುತ್ತದೆ" ಎಂದರು. ಗೊಂದಲ ಹೆಚ್ಚಾಗುತ್ತಿದ್ದಂತೆ ಮೇಯರ್ ಶೋಭಾ ಸೋಮನಾಚೆ ಮಧ್ಯಪ್ರವೇಶಿಸಿ ಮುಂದಿನ ಸಭೆಯ ನೊಟೀಸ್ ಅನ್ನು ಭಾಷಾಂತರ ಮಾಡಿ ಕೊಡಲಾಗುವುದು ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.
ಅಧಿಕಾರಿಗಳ ವರ್ಗಾವಣೆಗೆ ಠರಾವ್:ಅನೇಕ ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲೇ ಇರುವ ಅಧಿಕಾರಿಗಳ ವರ್ಗಾವಣೆಗೆ ಇಂದಿನ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಯಿತು. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ನಿಯಮಗಳ ಪ್ರಕಾರ ಗ್ರೇಡ್-ಎ ಮತ್ತು ಗ್ರೇಡ್-ಬಿ ವರ್ಗದ ಅಧಿಕಾರಿಗಳು ಒಂದೇ ಹುದ್ದೆಯಲ್ಲಿ ಮೂರು ವರ್ಷ ಇರಬೇಕು. ಸಿ ಗ್ರೇಡ್ ಅಧಿಕಾರಿಗಳು ನಾಲ್ಕು ವರ್ಷ, ಡಿ ಗ್ರೇಡ್ ನೌಕರರು 7 ವರ್ಷದ ಅವಧಿಗೆ ಒಂದೇ ಹುದ್ದೆಯಲ್ಲಿ ಇರಬಹುದು. ಆದರೆ ಈ ನಿಯಮ ಬೆಳಗಾವಿ ಪಾಲಿಕೆಯಲ್ಲಿ 1991ರಿಂದ ಸರಿಯಾಗಿ ಪಾಲನೆ ಆಗಿಲ್ಲ. ಒಂದೇ ಕಡೆ ಇರುವುದರಿಂದ ಅಧಿಕಾರಿಗಳು, ನೌಕರರಲ್ಲಿ ಉದಾಸೀನ, ನಿರ್ಲಕ್ಷ್ಯ ಭಾವನೆ ಮೂಡುವಂತೆ ಆಗಿದೆ. ಇದರಿಂದಾಗಿ ಬೆಳಗಾವಿ ಮಹಾನಗರದ ಅಭಿವೃದ್ಧಿ ಕುಂಠಿತಗೊಂಡಿದ್ದು, ಅಧಿಕಾರಿಗಳ ವರ್ಗಾವಣೆಗೆ ಠರಾವ್ ಪಾಸ್ ಮಾಡುವಂತೆ ಪಾಲಿಕೆ ಸದಸ್ಯ ಡಾ. ಶಂಕರಗೌಡ ಪಾಟೀಲ್ ಆಗ್ರಹಿಸಿದರು. ಬಳಿಕ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಠರಾವ್ ಪಾಸ್ ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು. ಇದೇ ವೇಳೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯ ಮಾತಿನ ಚಕಮಕಿ ನಡೆಯಿತು.