ಬೆಳಗಾವಿ: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 977 ಜಾಡಮಾಲಿ ನೌಕರರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಇಂದು ನೌಕರರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
2017ಕ್ಕಿಂತ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾಡಮಾಲಿಗಳನ್ನು ಮರುನೇಮಕಗೊಳಿಸಿ ಕನಿಷ್ಠ ವೇತನ ನೀಡಬೇಕು. ಸರ್ಕಾರ ನೇರವಾಗಿ ವೇತನ ಪಾವತಿಸಬೇಕು. ನಮ್ಮನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಲು ಇರುವ ಕಾನೂನು ನ್ಯೂನತೆ ಸರಿಪಡಿಸಿ ವಿಶೇಷ ನಿಯಮದಡಿ ನೇಮಕವೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.
'ಈಟಿವಿ ಭಾರತ' ಜೊತೆ ಮಾತನಾಡಿದ ಜಾಡಮಾಲಿ ನೌಕರ ಹುಸೇನಬಿ, 2001ರಿಂದ ಕಡಿಮೆ ವೇತನ ಪಡೆದು ಕೆಲಸ ಮಾಡುತ್ತಿರುವೆ. 2017ರಲ್ಲಿ ನನ್ನನ್ನು ತೆಗೆದು ಹಾಕಿದ್ದಾರೆ. ಆದರೂ ನಾನು ಕೆಲಸ ಬಿಟ್ಟಿಲ್ಲ. ಪೊಲೀಸ್ ಅಧಿಕಾರಿಗಳು ನೀಡುವ ಎರಡು ಸಾವಿರ ರೂಪಾಯಿಗೆ ನಿತ್ಯ ಕಸಗುಡಿಸಿ ಹೋಗುತ್ತಿದ್ದೇನೆ. ಪ್ರತಿ ಬಾರಿ ಅಧಿವೇಶನಕ್ಕೆ ಬಂದು ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ. ಈ ಸಲ ಬೇಡಿಕೆ ಈಡೇರದಿದ್ದರೆ ಮುಂದೆ ಆತ್ಮಹತ್ಯೆ ಮಾತ್ರ ನಮಗಿರುವ ದಾರಿ ಎಂದು ಅಳಲು ತೋಡಿಕೊಂಡರು.