ಕರ್ನಾಟಕ

karnataka

ETV Bharat / state

Electricity rate hike: ಕೈಗಾರಿಕೆಗಳ ವಿದ್ಯುತ್ ದರ ಇಳಿಸಿ - ಸರ್ಕಾರಕ್ಕೆ ಏಳು‌ ದಿನಗಳ‌ ಗಡುವು ಕೊಟ್ಟ ಬೆಳಗಾವಿ ಉದ್ಯಮಿಗಳು - etv bharat kannada

ಕೈಗಾರಿಕೆಗಳ ವಿದ್ಯುತ್ ದರ ಇಳಿಸದಿದ್ದರೆ ರಾಜ್ಯದ ಎಲ್ಲಾ ಕೈಗಾರಿಕೆಗಳನ್ನು ಒಂದು ದಿನ ಬಂದ್ ಮಾಡಬೇಕಾಗುತ್ತದೆ ಎಂದು ರೋಹನ್ ಜುವಳಿ ಎಚ್ಚರಿಕೆ ನೀಡಿದ್ದಾರೆ.

belgavi-industrialist-demanded-for-reduce-of-electricity-rates-for-industries
Electricity rate hike: ಕೈಗಾರಿಕೆಗಳ ವಿದ್ಯುತ್ ದರ ಇಳಿಸಿ - ಸರ್ಕಾರಕ್ಕೆ ಏಳು‌ ದಿನಗಳ‌ ಗಡುವು ಕೊಟ್ಟ ಬೆಳಗಾವಿ ಉದ್ಯಮಿಗಳು

By

Published : Jun 12, 2023, 3:39 PM IST

Updated : Jun 12, 2023, 4:09 PM IST

ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ರೋಹನ್ ಜುವಳಿ

ಬೆಳಗಾವಿ: ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಹೆಚ್ಚಳ ಮಾಡಿರುವುದಕ್ಕೆ ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಳು ದಿನಗಳೊಳಗೆ ಹೆಚ್ಚಿಸಿರುವ ವಿದ್ಯುತ್ ದರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ರೋಹನ್ ಜುವಳಿ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗಾವಿಯಲ್ಲಿ "ಈಟಿವಿ ಭಾರತ" ಜೊತೆಗೆ ಅವರು ಮಾತನಾಡಿದರು.

ನಾಳೆ ಬೆಳಗ್ಗೆ ಚನ್ನಮ್ಮ ವೃತ್ತದಿಂದ ಮೌನ ರ್‍ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ನಿಯಮ ಬಾಹಿರವಾಗಿ ಎಫ್ಎ‌ಸಿ ಚಾರ್ಜ್ ಹೆಚ್ಚಿಗೆ ಮಾಡಿದ್ದಾರೆ. ಕನಿಷ್ಠ ಶೇ.30-65ರಷ್ಟು ಹಳೆ ದರಕ್ಕಿಂತ ಈಗಿನ‌ ದರ ಹೆಚ್ಚಿಸಿದ್ದಾರೆ. ಇದರಿಂದ ಕೈಗಾರಿಕೆಗಳಿಗೆ ಬಹಳಷ್ಟು ಸಂಕಷ್ಟ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಡೀ ರಾಜ್ಯದಲ್ಲೆ ಎರಡನೇ ಅತೀ ದೊಡ್ಡ ರಫ್ತು ಮತ್ತು ತೆರಿಗೆ ಸಂಗ್ರಹ ನಮ್ಮ ಬೆಳಗಾವಿ ಜಿಲ್ಲೆಯಲ್ಲೇ ಆಗುತ್ತಿದೆ ಎಂದರು.

ಸರ್ಕಾರದ ಯಾವುದೇ ಸವಲತ್ತು ಪಡೆಯದೇ ಕೈಗಾರಿಕೆಗಳನ್ನು ನಾವು ಅಭಿವೃದ್ಧಿ ಪಡಿಸುತ್ತಿದ್ದೇವೆ. ನಾವು ನೇರವಾಗಿ ಮಹಾರಾಷ್ಟ್ರದ ಜೊತೆಗೆ ಸ್ಪರ್ಧಿಸುತ್ತಿದ್ದೇವೆ. ಆದರೆ ಅದು ಸಾಧ್ಯವಾಗುತ್ತಿಲ್ಲ, ಯಾಕೆಂದರೆ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕೈಗಾರಿಕೆಗಳಿಗೆ ಶೇ‌.80ರಷ್ಟು ಸಬ್ಸಿಡಿ ಕೊಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಬಹಳಷ್ಟು ಕೈಗಾರಿಕೆಗಳು ಬೆಳೆಯುವ ಸಂದರ್ಭದಲ್ಲಿ ಪ್ರೋತ್ಸಾಹಿಸುವ ಬದಲು ಅವುಗಳನ್ನು ಬಂದ್ ಮಾಡಿಸುವ ಕೆಲಸ ಮಾಡುತ್ತಿವೆ. ಹೀಗಾಗಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಏಳು ದಿನಗಳ ಗಡುವು ನೀಡುತ್ತಿದ್ದು, ಅಷ್ಟರೊಳಗೆ ನಿರ್ಣಯ ಹಿಂದೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲಾ ಕೈಗಾರಿಕೆಗಳನ್ನು ಒಂದು ದಿನ ಬಂದ್ ಮಾಡಬೇಕಾಗುತ್ತದೆ ಎಂದು ರೋಹನ್ ಜುವಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ಬೆಳಗಾವಿಯ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹೇಮೇಂದ್ರ ಪೋರವಾಲ್‌ ಮಾತನಾಡಿ, ತೆರಿಗೆ ಮತ್ತು ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಇಲ್ಲಿನ ಕೈಗಾರಿಕೆಗಳಿಗೆ ತನ್ನ ರಾಜ್ಯಕ್ಕೆ ಬರುವಂತೆ ಆಹ್ವಾನ ಕೊಡುತ್ತಿದೆ. ಹಾಗಾಗಿ ಕರ್ನಾಟಕ ಸರ್ಕಾರ ತನ್ನ ನಿಲುವು ಬದಲಿಸಬೇಕು. ಇಲ್ಲದಿದ್ದರೆ ಬೆಳಗಾವಿಯಿಂದ 13 ಕಿ.ಮೀ ದೂರದಲ್ಲಿರುವ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಶಿನೋಳಿಗೆ ನಮ್ಮ ಕೈಗಾರಿಕೆಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ(ಕೆಇಆರ್‌ಸಿ) ಶಿಫಾರಸ್ಸಿನಂತೆ ವಿದ್ಯುತ್ ಸರಬರಾಜು ಕಂಪನಿಗಳು ಹೆಚ್ಚಿಸಿದ ಶುಲ್ಕ ದುಬಾರಿಯಾಗಿದೆ. ಕೈಗಾರಿಕೋದ್ಯಮಿಗಳು ಹಾಗೂ ವರ್ತಕರಿಂದ ಇದನ್ನು ಭರಿಸಲು ಸಾಧ್ಯವಿಲ್ಲ. ಕೊರೊನಾ ಆತಂಕದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೈಗಾರಿಕೆಗಳು ಚೇತರಿಸಿಕೊಳ್ಳುತ್ತಿದ್ದ ಹಂತದಲ್ಲಿ ವಿದ್ಯುತ್‌ ಶುಲ್ಕ ಹೆಚ್ಚಿಸಿ, ಗಾಯದ ಮೇಲೆ ಬರೆ ಎಳೆದಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ಈ ವೇಳೆ ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರಿ, ಐಐಎಫ್ ಅಧ್ಯಕ್ಷ ಆನಂದ ದೇಸಾಯಿ, ಸಣ್ಣ ಕೈಗಾರಿಕೆಗಳ ಒಕ್ಕೂಟ ಅಧ್ಯಕ್ಷ ಮಹಾದೇವ ಚೌಗುಲೆ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:Electricity Bill: ಹೊಸ ಮನೆ, ಹೊಸ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಎಂದು ಪರಿಗಣನೆ: ಸಚಿವ ಕೆ ಜೆ ಜಾರ್ಜ್

Last Updated : Jun 12, 2023, 4:09 PM IST

ABOUT THE AUTHOR

...view details