ಬೆಳಗಾವಿ:ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಪ್ಯಾರಾಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ರೈತನ ಮಗಳು ಅಪೂರ್ವ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪ್ಯಾರಾಕ್ಲೈಂಬಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಿತ್ತೂರು ತಾಲೂಕಿನ ತೋಲಗಿ ಗ್ರಾಮದ ಸುನಿತಾ ದುಂಡಪ್ಪನವರ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಸುನಿತಾ ದುಂಡಪ್ಪನವರ್ ತೋಲಗಿ ಗ್ರಾಮದ ರೈತ ನೀಲಕಂಠ ಬಸಪ್ಪ ದುಂಡಪ್ಪನವರ್ ಹಾಗೂ ಸಾವಿತ್ರಿ ದಂಪತಿಯ ಕಿರಿಯ ಪುತ್ರಿಯಾಗಿದ್ದಾರೆ.
ನೀಲಕಂಠ ದುಂಡಪ್ಪನವರ್‌ಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಇವರಲ್ಲಿ ಸುನಿತಾ ದುಂಡಪ್ಪನವರ್ ಕೊನೆಯ ಮಗಳು. ಇದೇ ಮೊದಲ ಬಾರಿಗೆ ಅರೆ ದೃಷ್ಟಿದೋಷವುಳ್ಳವರ ವಿಭಾಗ (ಬಿ3 ಅಥವಾ ಅರೆ ದೃಷ್ಟಿದೋಷ) ದ ಪ್ಯಾರಾ ವಾಲ್ ಕ್ಲೈಂಬಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಅವರಿಗೆ ಕಂಚಿನ ಪದಕ ಲಭಿಸಿದೆ.