ಬೆಳಗಾವಿ :ಸಾಧಿಸುವ ಛಲವಿರುವ ಜನರಿಗೆ ಯಾವುದೂ ಅಡ್ಡಿಯಾಗದು ಅಂತಾರೆ. ಈ ಮಾತನ್ನು ಜಿಲ್ಲೆಯ ಯುವತಿ ತೋರಿಸಿಕೊಟ್ಟಿದ್ದಾರೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ವಿಶ್ವ ಕುಬ್ಜರ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರ ಹೆಸರು ಮಂಜುಳಾ ಶಿವಾನಂದ ಗೊರಗುದ್ದಿ. ಕರದಂಟು ನಾಡು ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ನಿವಾಸಿ.
ಜುಲೈ 28ರಿಂದ ಜರ್ಮನಿಯಲ್ಲಿ ಆರಂಭವಾಗುತ್ತಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಮಂಜುಳಾ, ಚಕ್ರ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಮಂಗಳವಾರ ಬೆಂಗಳೂರಿನಿಂದ ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ. ಕರ್ನಾಟಕದಿಂದ 8 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಇದರಲ್ಲಿ ಮಂಜುಳಾ ಒಬ್ಬರೇ ಮಹಿಳಾ ಆಟಗಾರ್ತಿ ಎಂಬುದು ವಿಶೇಷ.
ಈ ಎಲ್ಲ ಆಟಗಾರರು ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದರು. ಜರ್ಮನಿಗೆ ತೆರಳಲು ಮಂಜುಳಾ ಅವರಿಗೆ 2.50 ಲಕ್ಷ ರೂ. ಅವಶ್ಯಕತೆ ಇತ್ತು. ಇಷ್ಟು ದೊಡ್ಡ ಮೊತ್ತದ ಹಣ ಕೂಡಿಸಲು ಬಡ್ಡಿ ಸಾಲ ಮಾಡಿದ್ದಾರೆ. ಸಾಲ ಮಾಡಿಯಾದರೂ ಸರಿ, ನಾನು ಜರ್ಮನಿಗೆ ಹೋಗಿ, ಕ್ರೀಡಾಕೂಟದಲ್ಲಿ ಗೆದ್ದು ಚಿನ್ನದ ಪದಕ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿರುವ ಮಂಜುಳಾ ಕಾನೂನು ಪದವಿ ಪಡೆದಿದ್ದು, ವಕೀಲೆಯಾಗಿ ಜನರ ಸೇವೆ ಮಾಡುವ ಇಂಗಿತ ಹೊಂದಿದ್ದಾರೆ. ಸದ್ಯ ಸ್ಥಳೀಯ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕೆಲಸ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ತಂದೆಯನ್ನು ಕಳೆದುಕೊಂಡಿರುವ ಇವರು ತಮ್ಮ ತಾಯಿ, ಸಹೋದರ, ಮದುವೆಯಾಗಿರುವ ಇಬ್ಬರು ಸಹೋದರಿಯರ ಜೊತೆ ವಾಸವಾಗಿದ್ದಾರೆ.