ಕರ್ನಾಟಕ

karnataka

ETV Bharat / state

ಬೆಳಗಾವಿ: ಈದ್ ಮಿಲಾದ್​ ಮೆರವಣಿಗೆಗೆ ಗಣೇಶ ಮಂಡಳಿಗಳ ಮುಖಂಡರ ಸಾಥ್

ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ನೊಂದಿಗೆ ಈದ್ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಬೆಳಗಾವಿಯಲ್ಲಿ ಈದ್ ಮಿಲಾದ್​ ಮೆರವಣಿಗೆ
ಬೆಳಗಾವಿಯಲ್ಲಿ ಈದ್ ಮಿಲಾದ್​ ಮೆರವಣಿಗೆ

By ETV Bharat Karnataka Team

Published : Oct 1, 2023, 7:58 PM IST

ಬೆಳಗಾವಿ :ಬೆಳಗಾವಿಯಲ್ಲಿಂದು ಪ್ರವಾದಿ ಮೊಹಮ್ಮದ್ ಪೈಗಂಬರ್​ ಅವರ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಈದ್‌–ಮಿಲಾದ್‌ ಮೆರವಣಿಗೆ ವಿಜೃಂಭಣೆಯಿಂದ ಜರುಗಿದ್ದು, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಮುಖಂಡರೂ ಕೂಡ ಸಾಥ್ ನೀಡುವ ಮೂಲಕ ಭಾವೈಕ್ಯತೆ ಮೆರೆದರು.

ಪ್ರತಿ ವರ್ಷ ಈದ್‌–ಮಿಲಾದ್‌ ದಿನವೇ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿಯೂ ಸೆಪ್ಟೆಂಬರ್ 28ರಂದು ಹಬ್ಬದ ದಿನವೇ ಮೆರವಣಿಗೆಗೆ ಎಲ್ಲ ರೀತಿ ಸಿದ್ಧತೆಯನ್ನು ಮುಸ್ಲಿಂ ಸಮುದಾಯದವರು ಮಾಡಿಕೊಂಡಿದ್ದರು. ಆದರೆ, ಅದೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನೆ ಮೆರವಣಿಗೆಯೂ ಬಂದಿದ್ದರಿಂದ ಈದ್‌ ಮೆರವಣಿಗೆ ಮುಂದೂಡಲಾಗಿತ್ತು. ಹಾಗಾಗಿ, ಭಾನುವಾರ ನಡೆದ ಈದ್​ ಮೆರವಣಿಯಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಮುಖಂಡರೂ ಭಾಗಿಯಾಗಿ ಸಾಮರಸ್ಯ ಪ್ರದರ್ಶಿಸಿದರು.

ಶಾಸಕ ಆಸೀಫ್‌ ಸೇಠ್‌ ಮಾತನಾಡಿ, ಬೆಳಗಾವಿ ವಿವಿಧತೆಯಲ್ಲಿ ಏಕತೆ ಕಾಣುವ ಜಿಲ್ಲೆ. ಇಲ್ಲಿ ಎಲ್ಲ ಹಬ್ಬಗಳನ್ನೂ ಹಿಂದೂ–ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾ ಸಾಮರಸ್ಯ ಮೆರೆಯುತ್ತಾ ಬಂದಿದ್ದೇವೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗೋಣ. ಎಲ್ಲರಿಗೂ ಒಳಿತಾಗಲಿ ಎಂದು ನಾವೆಲ್ಲಾ ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಗಣೇಶ ಮೂರ್ತಿ ನಿಮಜ್ಜನಕ್ಕೆ ಅದ್ಧೂರಿ ಚಾಲನೆ: ಬೆಳಗಿನವರೆಗೂ ಮೆರವಣಿಗೆ

ಗಣೇಶ ಮಂಡಳಿ ಮುಖಂಡ ರಂಜೀತ ಚವ್ಹಾಣ ಪಾಟೀಲ ಮಾತನಾಡಿ, ಈದ್ ಮೆರವಣಿಗೆ ಮುಂದೂಡುವ ಮೂಲಕ ಬೆಳಗಾವಿಯಲ್ಲಿ ಮುಸ್ಲಿಮರು ಶಾಂತಿ ನೆಲೆಸಲು ಸಹಕರಿಸಿದ್ದಾರೆ. ಬರುವ ದಿನಗಳಲ್ಲೂ ಎಲ್ಲ ಹಬ್ಬಗಳನ್ನು ಹಿಂದೂ-ಮುಸ್ಲಿಂ ಸಮುದಾಯವರು ಒಟ್ಟಾಗಿ ಆಚರಿಸಿ, ನಗರದಲ್ಲಿ ಶಾಂತಿ ಕಾಪಾಡೋಣ ಎಂದು ಹೇಳಿದರು.

ನಗರದ ಹಳೆ ಪಿ.ಬಿ.ರಸ್ತೆಯ ಜಿನ್ನಾ ಚೌಕ್‌ನಿಂದ ಆರಂಭಗೊಂಡ ಮೆರವಣಿಗೆಯು ಕೇಂದ್ರ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಂಚರಿಸಿ, ಕ್ಯಾಂಪ್‌ ಪ್ರದೇಶದಲ್ಲಿರುವ ಹಜರತ್‌ ಸೈಯದ್‌ ಅಸದ್‌ಖಾನ್‌ ದರ್ಗಾ ಆವರಣದಲ್ಲಿ ಮುಕ್ತಾಯಗೊಂಡಿತು.

ಮೆರವಣಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಧರ್ಮಗುರು ಮುಫ್ತಿ ಮಂಜೂರ್ ಆಲಂ, ಮಾಜಿ ಶಾಸಕ ಫಿರೋಜ್‌ ಸೇಠ್‌, ಡಿಸಿಪಿ ರೋಹನ ಜಗದೀಶ, ಎಸಿಪಿ ಎನ್‌.ವಿ.ಭರಮನಿ, ಮುಖಂಡರಾದ ಅಕ್ಬರ್‌ ಬಾಗವಾನ, ಮಹಮ್ಮದ್‌ ಪೀರಜಾದೆ, ಮೌಲಾನಾ ಸರ್ದಾರ್‌, ವಿಕಾಸ ಕಲಘಟಗಿ ಸೇರಿ ಮತ್ತಿತರರು ಭಾಗವಹಿಸಿದ್ದರು. ವಿವಿಧ ಸಂಘಟನೆಗಳು ಮೆರವಣಿಗೆ ಮಾರ್ಗದಲ್ಲಿ ಅಲ್ಲಲ್ಲಿ ತಂಪು ಪಾನೀಯ, ಸಿಹಿ ಪದಾರ್ಥಗಳು ಹಾಗೂ ನೀರು ವಿತರಣೆ ಮಾಡಿದವು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಇದನ್ನೂ ಓದಿ:ಬೆಳಗಾವಿಯಲ್ಲಿ ಇತಿಹಾಸ ಬರೆದ ಗಣೇಶೋತ್ಸವ: ಸತತ 30 ಗಂಟೆಗಳ ಕಾಲ ನಡೆದ ನಿಮಜ್ಜನ ಮೆರವಣಿಗೆ

ABOUT THE AUTHOR

...view details