ಬೆಳಗಾವಿ ಗಣೇಶ ಮಂಡಳಿಗೆ 75 ವರ್ಷ ಬೆಳಗಾವಿ: ಕುಂದಾನಗರಿಯ ಸಾರ್ವಜನಿಕ ಗಣೇಶ ಮಂಡಳಿಗಳು ಶ್ರೀಗಣೇಶನ ಆರಾಧನೆ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ತೊಡಗಿಕೊಂಡಿವೆ. ಆ ನಿಟ್ಟಿನಲ್ಲಿ ಮಹಾದ್ವಾರ ರೋಡ್ ಮಹಾದ್ವಾರ ಚೌಕ್ನ ಸಾರ್ವಜನಿಕ ಗಣೇಶೋತ್ಸವ ಮಂಡಳಿ ರಚನೆಗೊಂಡು 75ನೇ ವರ್ಷ ತಲುಪಿದ ಹಿನ್ನೆಲೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಇಂದು ಯಶ್ ಆಸ್ಪತ್ರೆ, ಮಹಾವೀರ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪುರುಷರ ಜೊತೆಗೆ ಮಹಿಳೆಯರು ಕೂಡ ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಿದರು. 70ಕ್ಕೂ ಅಧಿಕ ಜನ ರಕ್ತದಾನ ಮಾಡಿ, ತಮಗೆ ಮತ್ತಷ್ಟು ಆರೋಗ್ಯ ಭಾಗ್ಯ ಕರುಣಿಸುವಂತೆ ಗಣಪನಲ್ಲಿ ಬೇಡಿಕೊಂಡರು.
ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ರಕ್ತದಾನ: ಇದೇ ವೇಳೆ ಮಾತನಾಡಿದ ಮಂಡಳಿ ಅಧ್ಯಕ್ಷ ಡಾ.ಎಸ್.ಕೆ.ಪಾಟೀಲ, ನಮ್ಮ ವಿಜ್ಞಾನಿಗಳು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸಂಶೋಧನೆ ಕೈಗೊಂಡಿದ್ದಾರೆ. ಆದರೆ ರಕ್ತವನ್ನು ತಯಾರು ಮಾಡಲು ವಿಜ್ಞಾನಿಗಳಿಗೆ ಈ ವರೆಗೂ ಆಗಿಲ್ಲ. ಹಾಗಾಗಿ ಮನುಷ್ಯರ ರಕ್ತವೊಂದೇ ಅದಕ್ಕೆ ಪರಿಹಾರ. ಆದ್ದರಿಂದ ದಾನಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು ರಕ್ತದಾನವೂ ಆಗಿದೆ ಎಂದರು.
ನಾನು ಕೂಡ ಇಂದು ರಕ್ತದಾನ ಮಾಡಿದ್ದು, 20ರಿಂದ 60 ವರ್ಷದೊಳಗಿನ ಯಾರು ಬೇಕಾದರೂ ಮಾಡಬಹುದು. ಇದರಿಂದ ಆರೋಗ್ಯದ ಮೇಲೆ ಯಾವುದೇ ರೀತಿ ದುಷ್ಪರಿಣಾಮ ಬೀರುವುದಿಲ್ಲ. ಬದಲಾಗಿ ನಮ್ಮ ಆರೋಗ್ಯಕ್ಕೆ ಬಹಳಷ್ಟು ಸುಧಾರಣೆ ಆಗಲು ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿದ ಡಾ. ನಮೃತಾ ದೇಸಾಯಿ ಮಾತನಾಡಿ, ಈ ವರೆಗೆ ನಾನು ಎರಡನೇ ಬಾರಿ ರಕ್ತದಾನ ಮಾಡಿದ್ದು, ನನಗೆ ಯಾವುದೇ ರೀತಿ ತೊಂದರೆ ಆಗಿಲ್ಲ. ಹಾಗಾಗಿ ಎಲ್ಲರೂ ರಕ್ತದಾನ ಮಾಡುವಂತೆ ಮನವಿ ಮಾಡಿದರು.
ಕೊಲ್ಹಾಪುರ ಮಹಾಲಕ್ಷ್ಮೀ ಮಂದಿರ ಶೈಲಿಯ ಮಂಟಪ: ಕೊಲ್ಹಾಪುರ ಮಹಾಲಕ್ಷ್ಮೀ ಮಂದಿರದ ಆಕಾರದಲ್ಲಿ ನಿರ್ಮಿಸಿದ ಸುಂದರ ಮಂಟಪದೊಳಗೆ ಸಿಂಹಾಸನಾರೂಢ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಂಟಪದೊಳಗೆ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿರಾಜೆ ಭೋಸಲೆ ಅವರ ಭಾವಚಿತ್ರ. ಅದೇ ರೀತಿ ಶಿವಾಜಿ ಮಹಾರಾಜರ ಸೇನಾಧಿಪತಿಗಳಾಗಿದ್ದ ತಾನಾಜಿ ಮಾಲುಸರೆ, ಬಾಜಿಪ್ರಭು ದೇಶಪಾಂಡೆ, ಬಾಜಿ ಪಾಸಲಕರ್, ಏಸಾಜಿ ಕಂಕ್, ಬಹಿರ್ಜಿ ನಾಯಿಕ್, ಕೊಂಡಾಜಿ ಫರ್ಜಂದ್, ಶಿವಾ ಕಾಶಿದ್ ಅವರ ಭಾವಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿವೆ. 75ನೇ ವರ್ಷದ ನಿಮಿತ್ತ ಗಲ್ಲಿಯ 75 ಹಿರಿಯ ನಾಗರಿಕರನ್ನು ಸತ್ಕರಿಸಲು ಮಂಡಳಿಯವರು ನಿರ್ಧರಿಸಿದ್ದಾರೆ.
ಇದನ್ನೂಓದಿ:ತಿಲಕರು ಆರಂಭಿಸಿದ ಬೆಳಗಾವಿ ಗಣೇಶೋತ್ಸವಕ್ಕೆ 119 ವರ್ಷಗಳ ಸಂಭ್ರಮ!