ಬೆಳಗಾವಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. 2020ರಲ್ಲಿ ಹಿಂಡಲಗಾ ಗ್ರಾಮದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಪತ್ರ ನೀಡಿದ್ದೆ ಎಂದು ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಡಲಗಾ ಗ್ರಾಮದ ಲಕ್ಷ್ಮಿದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ನನ್ನ ಬಳಿ ಬಂದಿದ್ದರು. ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಅನುಮತಿ ಪತ್ರ ನೀಡುವಂತೆ ಕೋರಿದ್ದರು. ಆ ಪ್ರಕಾರ ಗ್ರಾ.ಪಂ ಅಧ್ಯಕ್ಷರು, ಸದಸ್ಯರಿಗೆ ನಾನು ಲೆಟರ್ ಕೊಟ್ಟಿದ್ದು ನಿಜ. ಆದರೆ, ನಾನು ಕೊಟ್ಟ ಲೆಟರ್‌ಗೆ ಏನು ಆ್ಯಕ್ಷನ್ ಆಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುಮೋದನೆ ನೀಡಿರುವ ವಿಷಯ ನನಗೆ ಇವತ್ತಷ್ಟೇ ಗೊತ್ತಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್‌ಗೆ ನಾನು ಮುಖಾಮುಖಿ ಎಂದೂ ಭೇಟಿಯಾಗಿಲ್ಲ. ಅವರ ಆತ್ಮಹತ್ಯೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ, ಸಂತೋಷ್ ಆತ್ಮಹತ್ಯೆಗೆ ಶರಣಾಗಿರುವುದು ದುರಂತದ ವಿಷಯ ಎಂದರು.