ಕರ್ನಾಟಕ

karnataka

ETV Bharat / state

ಮಳೆಯಾದರೆ ಕುಂದಾನಗರಿ ಜನತೆಯ ಜಾಗರಣೆ: ಮುಗಿಯದ ಸ್ಮಾರ್ಟ್​ಸಿಟಿ ನಗರದ ಬವಣೆ - Amrit City Plan

ಸ್ಮಾರ್ಟ್​ಸಿಟಿ ಯೋಜನೆಯಲ್ಲಿ ಸ್ಥಾನಪಡೆದು ಅಭಿವೃದ್ಧಿಯತ್ತ ಹೆಜ್ಜೆ ಹಾಕಿರುವ ಬೆಳಗಾವಿ ನಗರದಲ್ಲಿ ಅವ್ಯವಸ್ಥೆಯೇ ಕಣ್ಣಿಗೆ ಬೀಳುತ್ತಿವೆ. ಮಳೆಗಾಲದ ಆರಂಭದಿಂದಲೂ ನಗರದ ಹಲವೆಡೆ ಮಳೆ ನೀರಿನಿಂದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದು, ನರಕಯಾತನೆ ಅನುಭವಿಸಬೇಕಾಗಿದೆ.

Heavy_Rain_Problem
ಬೆಳಗಾವಿಯಲ್ಲಿ ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು

By

Published : Oct 1, 2020, 3:45 PM IST

ಬೆಳಗಾವಿ:ಕುಂದಾನಗರಿ ಈಗಾಗಲೇ ಸ್ಮಾರ್ಟ್​ಸಿಟಿ ಹಾಗೂ ಅಮೃತ್ ಸಿಟಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭರಪೂರ ಅನುದಾನ ಸಹ ಸಿಕ್ಕಿದೆ. ಆದರೆ, ಜಿಲ್ಲೆಯ ಈಗಿನ ಸ್ಥಿತಿ ಮಾತ್ರ ಹಿಂದಿಗಿಂತ ಹೆಚ್ಚೇನು ಬದಲಾಗಿಲ್ಲ.

ಇನ್ನು ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಜನತೆ ಇನ್ನಿಲ್ಲದ ಸಂಕಷ್ಟ ಎದುರಿಸಬೇಕಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೀರಿನಲ್ಲಿಯೇ ರಾತ್ರಿಯಲ್ಲ ಜಾಗರಣೆ ಮಾಡಿ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾನಗರದ ಅನೇಕ ತಗ್ಗು ಪ್ರದೇಶಗಳ ನಿವಾಸಿಗಳು ಮಳೆಗಾಲದ ಸಮಯದಲ್ಲಿ ನೀರಲ್ಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ

ಬೆಳಗಾವಿಯ ಓಂನಗರ, ಸಾಯಿ ನಗರ, ರುಕ್ಮಿಣಿ ನಗರ, ವಡಗಾವಿ, ಶಹಾಪುರ, ಮಹಾತ್ಮಾಗಾಂಧಿ ಕಾಲೊನಿ ಸೇರಿದಂತೆ ಅನೇಕ ಕಡೆ ನಿವಾಸಿಗಳು ಮಳೆಗಾಲದ ಸಮಯದಲ್ಲಿ ನರಕಯಾತನೆ ಅನುಭವಿಸುವಂತಾಗಿದೆ.

ಒಳಚರಂಡಿ ಇಲ್ಲದಿರುವುದೇ ಸಮಸ್ಯೆಗೆ ಕಾರಣ

ಸಮರ್ಪಕ ಒಳಚರಂಡಿ ಹಾಗೂ ಬಳ್ಳಾರಿ ನಾಲೆ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ಪ್ರತಿವರ್ಷ ನಗರದಲ್ಲಿ ಅವಾಂತರ ಸೃಷ್ಟಿಯಾಗುತ್ತದೆ. ಜೀವನ ಪರ್ಯಂತ ದುಡಿದ ಹಣದಲ್ಲಿ ಕನಸಿನ ಮನೆ ನಿರ್ಮಿಸಿಕೊಂಡವರು ಪರಿಹಾರ ಕೇಂದ್ರಕ್ಕೆ ಶಿಫ್ಟ್ ಆಗುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗುತ್ತಿದೆ.

ಚರಂಡಿ ಇದ್ದರೂ ಸ್ವಚ್ಛತೆ ಇಲ್ಲ

58 ವಾರ್ಡ್ ವ್ಯಾಪ್ತಿ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 11 ವಾರ್ಡ್‍ಗಳಲ್ಲಿ ಪೂರ್ಣ ಪ್ರಮಾಣದ ಹಾಗೂ 47 ವಾರ್ಡ್‍ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಪೌರ ಕಾರ್ಮಿಕರಿದ್ದಾರೆ. ನಗರದ ಹಲವು ಕಡೆ ಸಮರ್ಪಕ ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಈ ಕಾರಣವೂ ಮಳೆಗಾಲದ ಸಮಯದಲ್ಲಿ ಮನೆಗೆ ನೀರು ನುಗ್ಗಲು ಪ್ರಮುಖ ಕಾರಣ.

ನಗರದ ಮಹಾತ್ಮಾಗಾಂಧಿ ಕಾಲೊನಿ ಎತ್ತರದ ಪ್ರದೇಶದಲ್ಲಿದ್ದರೂ ಚರಂಡಿಗಳ ನಿರ್ವಹಣೆ ಕೊರತೆಯಿಂದ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಇಲ್ಲಿನ ಮನೆಗಳು ಜಲಾವೃತಗೊಂಡಿದ್ದವು. ಸಂಬಂಧಿಕರ ಮನೆಗಳು ನಗರಗಳಲ್ಲಿ ಇದ್ದರೂ ವಯಸ್ಸಾದವರು ಕೊರೊನಾ ಕಾರಣಕ್ಕೆ ನೀರಲ್ಲೇ ಎರಡ್ಮೂರು ದಿನ ಕಳೆಯಬೇಕಾಯಿತು.

ಅಭಿವೃದ್ಧಿ ಹೊಂದಿರುವ ನಗರಕಷ್ಟೇ ಆದ್ಯತೆ

2008ರಿಂದ ಮಹಾನಗರಕ್ಕೆ ನಗರೋತ್ಥಾನ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ವರ್ಷ 100 ಕೋಟಿ ರೂ. ನೀಡುತ್ತಾ ಬಂದಿದೆ. ತೆರಿಗೆ ಜೊತೆಗೆ ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಇದೀಗ ನಗರ ಸ್ಮಾರ್ಟ್‍ಸಿಟಿ ಯೋಜನೆಗೆ ಒಳಪಟ್ಟಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ 500 ಕೋಟಿ ನೀಡಿವೆ. ಈ ಹಣದಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತವಾಗಿ ನಡೆಯುತ್ತಿವೆ. ಆದರೆ ತಗ್ಗು ಪ್ರದೇಶ ಹಾಗೂ ಮೂಲಸೌಕರ್ಯ ವಂಚಿತ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿವೆ.

ABOUT THE AUTHOR

...view details