ಬೆಳಗಾವಿ :ಬಹುಬೇಡಿಕೆಯ ಬೆಳಗಾವಿ ಜಿಲ್ಲಾ ವಿಭಜನೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಅಖಂಡ ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಯನ್ನು ಪ್ರತ್ಯೇಕಿಸಬೇಕು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ಪಕ್ಷಾತೀತ ಬೆಂಬಲವೂ ದೊರೆಯುತ್ತಿದೆ. ಆದರೆ, ದಿಢೀರ್ ಹುಟ್ಟಿಕೊಂಡ ಈ ಬೆಳವಣಿಗೆ ಜಿಲ್ಲೆಯ ಪ್ರಭಾವಿ ರಾಜಕೀಯ ಕುಟುಂಬಗಳಾದ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬಗಳ ಸಂಘರ್ಷಕ್ಕೆ ವೇದಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಕಳೆದ ನಾಲ್ಕು ದಶಕಗಳಿಂದ ಪ್ರತ್ಯೇಕ ಜಿಲ್ಲೆಯ ಕೂಗೂ : ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂಬ ಕೂಗು ಇಂದು-ನಿನ್ನೆಯದಲ್ಲ. ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ, ಅಥಣಿ ಜಿಲ್ಲಾ ಹೋರಾಟ ವೇದಿಕೆ, ಗೋಕಾಕ್ ಜಿಲ್ಲಾ ಹೋರಾಟ ಸಮಿತಿ ಹಾಗೂ ನಿಪ್ಪಾಣಿ ಜಿಲ್ಲಾ ಹೋರಾಟ ಸಮಿತಿಗಳು ಈಗಾಗಲೇ ಹುಟ್ಟಿಕೊಂಡಿವೆ. ಜಿಲ್ಲೆಯನ್ನು ವಿಭಿಸುವುದಾದರೆ ತಮ್ಮ ತಮ್ಮ ತಾಲೂಕಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ಸ್ಥಳೀಯ ಶಾಸಕರು ಆದಿಯಾಗಿ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಲೇ ಬರಲಾಗುತ್ತಿದೆ.
ವಿಭಜನೆಗೆ ಕತ್ತಿ ಖಡಕ್ ನಿರ್ಧಾರ : ಆದರೆ, ನಿನ್ನೆಯಷ್ಟೇ ಜಿಲ್ಲಾ ವಿಭಜನೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಸಚಿವ ಉಮೇಶ ಕತ್ತಿ, ಬೆಳಗಾವಿಯನ್ನು ಪ್ರತ್ಯೇಕಿಸಿ ಮೂರು ಜಿಲ್ಲೆಗಳನ್ನು ಮಾಡಬೇಕು. ಉಪವಿಭಾಗಾಧಿಕಾರಿ ಕಚೇರಿ ಇರುವ ಬೆಳಗಾವಿ, ಚಿಕ್ಕೋಡಿ ಹಾಗೂ ಬೈಲಹೊಂಗಲ ಜಿಲ್ಲೆಗಳಾಗಬೇಕು. ಈ ಸಂಬಂಧ ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗಿದೆ. ಶೀಘ್ರವೇ ಬೆಳಗಾವಿ ನಾಯಕರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದೆ.
ನನಗೆ ಬೆಂಬಲ ಸಿಗಲಿ, ಸಿಗದೇ ಇರಲಿ. ಒಬ್ಬನಾದರೂ ಹೋಗಿ ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಸಲ್ಲಿಸುತ್ತೇನೆ ಎಂದಿದ್ದಾರೆ. ಸಚಿವ ಉಮೇಶ ಕತ್ತಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಬೆಂಬಲ ಸೂಚಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆ ಪ್ರತ್ಯೇಕವಾಗಬೇಕು. ಇದಕ್ಕೆ ಪಕ್ಷಾತೀತ ಬೆಂಬಲ ಸೂಚಿಸಲಾಗುವುದು ಎಂದಿದ್ದರು.
ಸಂಘರ್ಷಕ್ಕೆ ವೇದಿಕೆಯಾಗುತ್ತಾ? : ಕಳೆದೊಂದು ದಶಕಗಳಿಂದ ಕತ್ತಿ-ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಒಂದೇ ಆಗಿದ್ದರು. ಆದರೆ, ಕಳೆದ ಪರಿಷತ್ ಚುನಾವಣೆ ನಂತರ ಎರಡೂ ಕುಟುಂಬಗಳ ಮಧ್ಯೆದ ವೈಮನಸ್ಸು ದಿನ ಕಳೆದಂತೆ ಬಿಗಡಾಯಿಸುತ್ತಿದೆ. ಇನ್ನು ಜಿಲ್ಲಾ ವಿಭಜನೆ ಆದರೆ ಗೋಕಾಕಿಗೂ ಜಿಲ್ಲಾ ಸ್ಥಾನಮಾನ ದೊರಕಿಸಿಕೊಡಲು ಜಾರಕಿಹೊಳಿ ಸಹೋದರರು ಸರ್ವಪ್ರಯತ್ನ ಮಾಡಲೇಬೇಕು. ಆದರೀಗ ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ಅಖಂಡ ಬೆಳಗಾವಿಯನ್ನು ವಿಭಜಿಸಿ ಬೆಳಗಾವಿ, ಚಿಕ್ಕೋಡಿ ಹಾಗೂ ಬೈಲಹೊಂಗಲನ್ನು ಜಿಲ್ಲೆ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಲಿದೆ.