ಬೆಳಗಾವಿ:ಜಿಲ್ಲೆಗೆ ಹೆಚ್ಚುವರಿಯಾಗಿ 32 ಕೆ.ಎಲ್ ಆಕ್ಸಿಜನ್ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ಸದ್ಯಕ್ಕೆ ಇರುವುದರಲ್ಲಿಯೇ ನಿರ್ವಹಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಹೆಚ್ಚುವರಿ ಆಮ್ಲಜನಕ ನೀಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸಿಎಂ ಜೊತೆಗಿನ ವಿಡಿಯೋ ಸಂವಾದದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಿಲ್ಲೆಯಲ್ಲಿ 24 ಕೋವಿಡ್ ಕೇರ್ ಸೆಂಟರ್ಗಳಲ್ಲಿ 980 ಹಾಸಿಗೆಗಳಿವೆ. ಅದರಲ್ಲಿ ಕೇವಲ 81 ರೋಗಿಗಳು ಮಾತ್ರ ದಾಖಲಾಗಿದ್ದಾರೆ. ಹೀಗಾಗಿ ಹೆಚ್ಚೆಚ್ಚು ಜನರು ಬರುವಂತೆ ಎಲ್ಲರನ್ನೂ ಮನವೊಲಿಸಿ ಕೋವಿಡ್ ಕೇರ್ ಸೆಂಟರ್ಗೆ ಬರುವಂತೆ ಮಾಡಬೇಕಿದೆ. ಇದರ ಜೊತೆಗೆ ಗ್ರಾಮೀಣ ಮಟ್ಟದಲ್ಲೂ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಹೀಗೆ ಮಾಡಿದಾಗ ಹಳ್ಳಿಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಲಿದೆ" ಎಂದರು.