ಬೆಳಗಾವಿ :ದಲಿತರಿಗೆ ಸ್ಮಶಾನ ಭೂಮಿ ಕಲ್ಪಿಸಲು ಸರ್ಕಾರದ ಜಮೀನು ಲಭ್ಯ ಇಲ್ಲದಿದ್ದರೆ ಖಾಸಗಿ ಜಮೀನು ಮಾಲೀಕರ ಜೊತೆ ತಮ್ಮ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ಕರೆದು ಚರ್ಚಿಸಬೇಕು. ತಕ್ಷಣವೇ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ಸಾವಿರ ಜನಸಂಖ್ಯೆ ಇರುವ ಕಡೆ 20 ಗುಂಟೆ ಜಮೀನು ಒದಗಿಸಲು ಅವಕಾಶವಿದ್ದು, ಈ ಅನುಪಾತದಲ್ಲಿ ಜಮೀನು ಗುರುತಿಸಬೇಕು. ಸರ್ಕಾರಿ ಜಮೀನು ಗುರುತಿಸಿ, ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಲು ಕೂಡ ಹಣಕಾಸಿನ ತೊಂದರೆಯಿಲ್ಲ. ಆದ್ದರಿಂದ ಅಗತ್ಯವಿರುವ ಕಡೆ ಜಮೀನು ಖರೀದಿಸಲು ಕ್ರಮ ವಹಿಸುವಂತೆ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದರು.
ವಾಲ್ಮೀಕಿ ತಪೋವನಕ್ಕೆ ಭೂಮಿ :ವಾಲ್ಮೀಕಿ ತಪೋವನಕ್ಕೆ ಅಲದಾಳ ಕ್ರಾಸ್ ಬಳಿ ಲಭ್ಯವಿರುವ ಜಮೀನಿನಲ್ಲಿ 5 ಎಕರೆ ಒದಗಿಸಬೇಕು ಎಂದು ಸಮಿತಿಯ ಸದಸ್ಯ ವಿಜಯ್ ತಳವಾರ್ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಬೆಳಗಾವಿ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.