ಬೆಳಗಾವಿ:ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ವಿವಿಧ ಸಂದರ್ಭಗಳಲ್ಲಿ ತಮಗೆ ಸನ್ಮಾನದ ರೂಪದಲ್ಲಿ ಬಂದಿದ್ದ ನೂರಾರು ಶಾಲುಗಳನ್ನು ವೃದ್ಧಾಶ್ರಮಕ್ಕೆ ನೀಡುವುದರ ಜೊತೆಗೆ ಆಶ್ರಮದ ಹಿರಿಯ ಜೀವಗಳೊಟ್ಟಿಗೆ ಊಟ ಮಾಡಿ ಕೆಲಸಮಯ ಕಳೆದರು.
ನಗರದ ಬಮನವಾಡಿಯಲ್ಲಿ ಸಮಾಜ ಸೇವಕ ಹಾಗೂ ಮಾಜಿ ಮಹಾಪೌರ ವಿಜಯ್ ಮೋರೆ ಅವರು ನಡೆಸುತ್ತಿರುವ ಶಾಂತಾಯಿ ವೃದ್ಧಾಶ್ರಮಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ನೂರಾರು ಶಾಲುಗಳನ್ನು ಆಶ್ರಮದ ನಿವಾಸಿಗಳಿಗೆ ವಿತರಿಸಿದರು. ಜಿಲ್ಲಾಧಿಕಾರಿ, ಅವರ ಪತ್ನಿ ತನುಜಾ ಹಿರೇಮಠ ಕೂಡ ಆಶ್ರಮಕ್ಕೆ ತೆರಳಿದ್ದರು.
ಆಶ್ರಮ ನಿವಾಸಿಗಳೊಂದಿಗೆ ಹೋಳಿಗೆ ಊಟ:ಆಶ್ರಮಕ್ಕೆ ಬಂದ ಜಿಲ್ಲಾಧಿಕಾರಿ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಲ್ಲಿನ ನಿವಾಸಿಗಳು, ಅವರೊಂದಿಗೆ ಹೋಳಿಗೆ ಊಟ ಸವಿದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅಡುಗೆ ಮನೆಗೆ ತೆರಳಿ ಅಡುಗೆ ಕೆಲಸದಲ್ಲಿ ಕೈಜೋಡಿಸಿದ ಜಿಲ್ಲಾಧಿಕಾರಿ ಪತ್ನಿ ತನುಜಾ ಅವರು ಸ್ವತಃ ಹೋಳಿಗೆ ಮಾಡುವ ಮೂಲಕ ಸರಳತೆ ಮೆರೆದರು.