ಬೆಳಗಾವಿ :ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕೇಂದ್ರದ ಸುತ್ತಲೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
58 ವಾರ್ಡ್ಗಳಿಗೆ ನಡೆಯುವ ಚುನಾವಣೆಗೆ ನಾಮಮತ್ರ ಸಲ್ಲಿಸಲು ಪಾಲಿಕೆ ಕಚೇರಿ ಸೇರಿ 12 ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಕಾಂಗ್ರೆಸ್, ಬಿಜೆಪಿ, ಎಂಇಎಸ್, ಆಮ್ ಆದ್ಮಿ ಪಾರ್ಟಿ, ಜೆಡಿಎಸ್, ಎಎಂಐಎಂ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಬಿಜೆಪಿಯಲ್ಲಿ ಮುಗಿಯದ ಟಿಕೆಟ್ ಗೊಂದಲ :ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ನಿನ್ನೆ ಮಧ್ಯರಾತ್ರಿಯೇ ಪಕ್ಷದ ಅಭ್ಯರ್ಥಿಗಳನ್ನು ಕರೆಯಿಸಿ ಟಿಕೆಟ್ ಫೈನಲ್ ಮಾಡಿ 'ಬಿ' ಫಾರ್ಮ್ ನೀಡಲಾಗಿದೆ. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಬಂದು ನಾಮಪತ್ರ ಸಲ್ಲಿಸಿದರು.
ಆದರೆ, ಬಿಜೆಪಿ ಪಕ್ಷದಿಂದ ನಿನ್ನೆ ರಾತ್ರಿ ಮೊದಲ ಹಂತದಲ್ಲಿ 21 ಮತ್ತು ಎರಡನೇ ಹಂತದ 13 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಅಭ್ಯರ್ಥಿಗಳು ಆಯ್ಕೆ ಆಗದ ಹಿನ್ನೆಲೆ ಕೆಲ ಅಭ್ಯರ್ಥಿಗಳು ಸ್ವತಂತ್ರವಾಗಿಯೇ ಬಂದು ನಾಮಪತ್ರ ಸಲ್ಲಿಸಿ ಹೋದರು. ಇದಲ್ಲದೇ ಎರಡು ಪಕ್ಷದ ಟಿಕೆಟ್ ವಂಚಿತ ಅಭ್ಯರ್ಥಿಗಳ ಕೂಡ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.