ಬೆಳಗಾವಿ: ಕರ್ನಾಟಕದ ಎರಡನೇ ರಾಜಧಾನಿ ಎಂಬ ಕೀರ್ತಿಗೆ ಪಾತ್ರವಾಗಿರುವ ಕುಂದಾನಗರಿಯಲ್ಲಿ ಜನಸಂಖ್ಯೆ ಹಾಗೂ ವಾಹನ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಜಿಲ್ಲೆಯ ಜನರ ಬೇಡಿಕೆಯಂತೆ ಆರಂಭವಾದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ನಾಲ್ಕು ವರ್ಷಗಳೇ ಕಳೆದರೂ ಅಪೂರ್ಣವಾಗಿಯೇ ಉಳಿದಿದೆ. ಪರಿಣಾಮ, ಬೇರೆ ರಾಜ್ಯಗಳಿಗೆ ಸಂಚರಿಸುವ ಜನರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಹೌದು, ನಗರದ ಪ್ರವಾಸಿ ಮಂದಿರದ ಎದುರಿಗೆ 9 ಎಕರೆ ಭೂಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರ ಬಸ್ ನಿಲ್ದಾಣ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಆದ್ರೆ, ಕಾಮಗಾರಿ ಆರಂಭವಾಗಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದರೂ ಈವರೆಗೆ ಪೂರ್ಣಗೊಂಡಿಲ್ಲ. ಜಿಲ್ಲೆಯಲ್ಲಿ ಡಿಸಿಎಂ, ಸಾರಿಗೆ ಖಾತೆ ಸೇರಿ ನಾಲ್ವರು ಸಚಿವರಿದ್ದರೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಗೋಳನ್ನು ಕೇಳುವವರು ಇಲ್ಲದಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿಯೇ ಕಾಮಗಾರಿಗೆ ಚಾಲನೆ:
ಕಾಂಗ್ರೆಸ್ ಸರ್ಕಾರದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2016ರ ಡಿ.3 ರಂದು 30 ಕೋಟಿ ರೂ.ಗಳ ವೆಚ್ಚದಲ್ಲಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಚಾಲನೆ ಕೊಟ್ಟಿದ್ದರು. 2018ರ ಫೆಬ್ರುವರಿ ಹೊತ್ತಿಗೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆ ಮುಕ್ತಗೊಳಿಸುವಂತೆ ಸೂಚನೆ ನೀಡಿದ್ದರು. ಆದ್ರೆ, ಕಾಲಾವಧಿ ಮುಗಿದು ಎರಡೂವರೆ ವರ್ಷ ಕಳೆದರೂ ಕಾಮಗಾರಿ ಇನ್ನೂ ಮುಗಿಯುವ ಹಂತಕ್ಕೆ ಬಂದಿಲ್ಲ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ವೇಗ ಪಡೆಯಲಿಲ್ಲ:
2018ರಲ್ಲಿ ಸಾರ್ವಜನಿಕರ ಸೇವೆಗೆ ಸಿಗಬೇಕಾಗಿದ್ದ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿರಲಿಲ್ಲ. ಮುಂದೆ ಪ್ರವಾಹದ ನೆಪ ಮಾಡಿಕೊಂಡು ಕಾಮಗಾರಿಗೆ ಆರು ತಿಂಗಳ ಕಾಲಾವಧಿ ವಿಸ್ತರಣೆ ಮಾಡಲಾಗಿತ್ತು. ಆದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಈಗ ಮತ್ತೆ ಲಾಕ್‌ಡೌನ್ ಹಾಗೂ ಬಸ್‌ಗಳ ನಿಲುಗಡೆಗೆ ಸ್ಥಳಾವಕಾಶದ ನೆಪ ಮಾಡಿಕೊಂಡು ಗುತ್ತಿಗೆದಾರರು ಕಾಮಗಾರಿಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಾದ ಜಿಲ್ಲೆಯ ಪ್ರಭಾವಿ ನಾಯಕರ ನಿರ್ಲಕ್ಷ್ಯದಿಂದಾಗಿ ಕಾಮಗಾರಿಗೆ ಹಿನ್ನೆಡೆಯಾಗುತ್ತಿದೆ ಎನ್ನಲಾಗಿದೆ.
ಬಸ್ ನಿಲ್ದಾಣದಲ್ಲಿ ಏನೇನಿದೆ?
30 ಕೋಟಿ ವೆಚ್ಚದಲ್ಲಿ ಆಗುತ್ತಿರುವ ಕೇಂದ್ರ ಬಸ್ ನಿಲ್ದಾಣ ಒಟ್ಟು 9 ಎಕರೆ ಪ್ರದೇಶವನ್ನು ಒಳಗೊಂಡಿದೆ. ನಿಲ್ದಾಣದ ಆವರಣದಲ್ಲಿ ಕಾಂಕ್ರಿಟ್ ಹಾಕುವುದು, ಶೌಚಾಲಯ, ವಾಣಿಜ್ಯ ಮಳಿಗೆಗಳು, ಸಂಚಾರ ನಿರೀಕ್ಷಕ ಕೊಠಡಿ, ವಿಶ್ರಾಂತಿ ಗೃಹ, ನೀರು ಮರುಬಳಕೆ ಸ್ಥಾವರ, ಕಟ್ಟಡಗಳು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇತರ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಶೇ.80 ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಕೊನೆಯ ಹಂತದ ಕಾಮಗಾರಿ ಆರಂಭಿಸಿ ವರ್ಷವಾದರೂ ಇನ್ನೂ ಬಸ್ ನಿಲ್ದಾಣ ಸಾರ್ವಜನಿಕ ಸೇವೆಗೆ ಸಿದ್ದವಾಗಿಲ್ಲ.
ಈಟಿವಿ ಭಾರತ ಜೊತೆ ಮಾತನಾಡುತ್ತಿರುವ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್. ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ ನಿಲ್ದಾಣ
ಪ್ರತಿದಿನ ಸಾವಿರಾರು ಪ್ರಯಾಣಿಕರು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಬೆಳಗಾವಿ ಘಟಕ ಸೇರಿದಂತೆ ನಾನಾ ಘಟಕಗಳಿಂದ ಪ್ರತಿದಿನ 1,600 ಕ್ಕೂ ಅಧಿಕ ಬಸ್‌ಗಳು ಸಂಚರಿಸುತ್ತವೆ. ಮುಂಬೈ, ಪುಣೆ, ಗೋವಾ, ಚೆನ್ನೈ, ಹೈದರಾಬಾದ್, ಹುಬ್ಬಳ್ಳಿ, ಬೆಂಗಳೂರು, ಬಾಗಲಕೋಟೆ, ಮೈಸೂರು, ಬೀದರ್, ವಿಜಯಪುರ ಸೇರಿ ರಾಜ್ಯ ಮತ್ತು ಅಂತಾರಾಜ್ಯಗಳಿಗೆ ಪ್ರತಿದಿನ ಬಸ್‌ಗಳ ಸಂಚಾರ ಮಾಡುತ್ತವೆ. ಇಷ್ಟೊಂದು ಬಸ್‌ಗಳ ನಿಲುಗಡೆ ಹಾಗೂ ಪ್ರಯಾಣಿಕರಿಗೆ ಸಮರ್ಪಕ ವ್ಯವಸ್ಥೆಯಿಲ್ಲ. 4 ವರ್ಷದಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆಯಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆ ಬಂದರಂತೂ ನಿಲ್ದಾಣದ ಆವರಣ ಅಕ್ಷರಶಃ ಕೆಸರು ಗದ್ದೆಯಂತಾಗುತ್ತದೆ. ಇದರಿಂದ, ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಪ್ರಯಾಣಿಕರು ಹಾಗೂ ಸಾರ್ವಜನಿಕರು ನಾಲ್ಕು ವರ್ಷದಿಂದ ಎಂತಹ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶಪಡುವಂತಾಗಿದೆ.
ಜಿಲ್ಲಾಮಂತ್ರಿಗಳು ರಾಜಕಾರಣಕ್ಕೆ ಸೀಮಿತ?
ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಿ ಗುರುತಿಸಲ್ಪಟ್ಟ ಬೆಳಗಾವಿಯಲ್ಲಿ ನಾಲ್ಕು ಜನ ಪ್ರಭಾವಿ ಮಂತ್ರಿಗಳಿದ್ದರೂ ಯಾವೊಬ್ಬ ಮಂತ್ರಿಗಳು ಮಹಾನಗರ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಕಾರಣ ಸ್ಮಾರ್ಟ್ಸಿಟಿ ಕಾಮಗಾರಿ, ಬಸ್ ನಿಲ್ದಾಣ, ಸಿಸಿ ರಸ್ತೆ ಕಾಮಗಾರಿಗಳು, ಬಳ್ಳಾರಿ ನಾಲಾ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನ ಬಗೆಹರಿಸಲು ಜತೆಗೆ ನಡೆಯುತ್ತಿರುವ ಕಾಮಗಾರಿಗಳಿಗೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತಿಲ್ಲ. ಪರಿಣಾಮ, ಹೀಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನೆಡೆಯಾಗುತ್ತದೆ. ಇದರಿಂದಾಗಿ ಜಿಲ್ಲೆ ಹಿಂದುಳಿಯುವಂತ ಸ್ಥಿತಿ ನಿರ್ಮಾಣವಾಗಲಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕೆಂಬ ಒಳ್ಳೆಯ ಉದ್ದೇಶದಿಂದ ಕೈಗೊಂಡಿರುವ ಕಾಮಗಾರಿಗೆ ಸಾರಿಗೆ ಸಚಿವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಕಾಮಗಾರಿಗೆ ವೇಗ ನೀಡಲು ಮುಂದಾಗಬೇಕು. ಉದ್ದೇಶಿತ ಕೆಲಸಕ್ಕೆ ಆದಷ್ಟು ಬೇಗ ಬಳಕೆಯಾಗುವಂತೆ ನೋಡಿಕೊಳ್ಳಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.