ಬೆಳಗಾವಿ :ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ‘ಕೈ’ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ. ಕೆಪಿಸಿಸಿಯಿಂದ ಹೈಕಮಾಂಡ್‍ಗೂ ಸತೀಶ್ ಒಬ್ಬರ ಹೆಸರನ್ನೇ ಶಿಫಾರಸು ಮಾಡಲಾಗಿದೆ. ಬಲಾಡ್ಯ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯ ಪ್ರಬಲ ಅಭ್ಯರ್ಥಿ ಯಾರಾಗ್ತಾರೆ ಎಂಬುದೀಗ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ ಐವರ ಹೆಸರನ್ನು ಕೇಂದ್ರ ಬಿಜೆಪಿ ಚುನಾವಣೆ ಸಮಿತಿಗೆ ಶಿಫಾರಸು ಮಾಡಲಾಗಿದೆ. ಅಲ್ಲದೇ ಸಭೆಯಲ್ಲಿ ದಿ. ಸುರೇಶ್ ಅಂಗಡಿ ಕುಟುಂಬವನ್ನು ಪರಿಗಣಿಸಬೇಕು ಎಂಬುದರ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.
ಇದರ ಜೊತೆಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ, ನ್ಯಾಯವಾದಿ ಹಾಗೂ ಬಿಜೆಪಿ ವಕ್ತಾರ ಎಂ.ಬಿ ಝಿರಲಿ, ಖ್ಯಾತ ವೈದ್ಯ ಡಾ.ಗಿರೀಶ್ ಸೋನವಾಲ್ಕರ್, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ರವಿ ಪಾಟೀಲ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಆದರೆ, ಜಿಲ್ಲೆಯಲ್ಲಿ ಹಿಡಿತ ಹೊಂದಿರುವ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯ ಪ್ರಬಲ ಅಭ್ಯರ್ಥಿ ಯಾರಾಗ್ತಾರೆ ಎಂಬುವುದೇ ಇದೀಗ ಕುತೂಹಲ ಮೂಡಿಸಿದೆ.
ಸತೀಶ್ ಕಣಕ್ಕೀಳಿಯುವುದು ನಿಶ್ಚಿತ! :2028ರ ನಂತರ ಮುಖ್ಯಮಂತ್ರಿ ಹುದ್ದೆಗೆ ನಾನೂ ಆಕಾಂಕ್ಷಿ ಎಂದು ಹಲವು ಸಲ ಹೇಳಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಹೈಕಮಾಂಡ್ ಆದೇಶಕ್ಕೆ ತಲೆಭಾಗುವ ಸಾಧ್ಯತೆ ದಟ್ಟವಾಗಿದೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಸತೀಶ್ ಈ ಸಲದ ಉಪಚುನಾವಣೆಯಲ್ಲಿ ಕಣಕ್ಕಿಳಿಯುವುದು ನಿಶ್ಚಿತ ಎನ್ನಲಾಗುತ್ತಿದೆ.
ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸಿದರೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಂಕಾ ವಾದ್ರಾ ಅವರಿಗೆ ಹತ್ತಿರವಾಗಬಹುದು. ಅಲ್ಲದೇ ಹೈಕಮಾಂಡ್ ನಾಯಕರ ಉತ್ತಮ ಒಡನಾಟ ಹೊಂದಿರುವ ಮುಖಂಡರ ಸಂಪರ್ಕ ಸಾಧಿಸಲು ನೆರವಾಗಬಹುದು ಎಂಬ ಕಾರಣಕ್ಕೆ ಸತೀಶ್ ಉಪ ಸಮರಕ್ಕೆ ಸ್ಪರ್ಧಿಸಲು ಒಲವು ತೋರಿದ್ದಾರೆ.
ಹೈಕಮಾಂಡ್ ನಾಯಕರ ವಿಶ್ವಾಸ ಗಳಿಸಿದರೆ ಮುಂದೆ ಸಿಎಂ ಅಭ್ಯರ್ಥಿ ಆಗಲು ನೆರವಾಗಬಹುದು ಎಂಬುವುದು ಸತೀಶ್ ಜಾರಕಿಹೊಳಿ ಲೆಕ್ಕಾಚಾರವಾಗಿದೆ. ಈ ಕಾರಣಕ್ಕೆ ದೆಹಲಿಗೆ ತೆರಳಲಿರುವ ಸತೀಶ್ ಜಾರಕಿಹೊಳಿ ಒಂದು ವೇಳೆ ತಾನು ಗೆದ್ದರೆ ಯಮಕನಮರಡಿ ಕ್ಷೇತ್ರದ ಉಪಚುನಾವಣೆಯಲ್ಲಿ ಪುತ್ರಿ ಪ್ರಿಯಂಕಾ ಇಲ್ಲವೇ ಸಹೋದರ ಲಖನ್‍ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಜಾತಿ ಸಮೀಕರಣ? :ಜಾತಿ ಸಮೀಕರಣ ಆಧಾರದ ಮೇಲೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಲಿಂಗಾಯತ ಪಂಚಮಸಾಲಿ ಸಮಾಜದ ಕೊಡುಗೆಯೂ ಹೆಚ್ಚಿದೆ. ಅಲ್ಲದೇ ಇತ್ತೀಚೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕು ಎಂದು ದೊಡ್ಡಮಟ್ಟದ ಪಾದಯಾತ್ರೆ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಾಗೂ ಉಪವಾಸ ಧರಣಿ ನಡೆಸಲಾಗಿತ್ತು.