ಬೆಳಗಾವಿ :ಒಂದು ಉಪಚುನಾವಣೆ ಸೇರಿ 15 ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರ ಇದೀಗ ಮತ್ತೊಂದು ಉಪಸಮರಕ್ಕೆ ಸಜ್ಜಾಗಿದೆ.
ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಬೆಳಗಾವಿ ಕ್ಷೇತ್ರಕ್ಕೆ ಇದು ಎರಡನೇ ಉಪ ಚುನಾವಣೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆದ್ದರೆ ಹೊಸ ದಾಖಲೆ ಸೃಷ್ಟಿಯಾಗಲಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ದಿ.ಸುರೇಶ್ ಅಂಗಡಿಯವರ ಧರ್ಮಪತ್ನಿ ಅವರ ಸ್ಪರ್ಧೆಯಿಂದ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೆ, ಇತ್ತ ಬಿಜೆಪಿಯ ಮಂಗಳಾ ಅನುಕಂಪದ ಅಲೆ ನಂಬಿ ಮತಬೇಟೆ ನಡೆಸುತ್ತಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಚಿವ ಜಗದೀಶ್ ಶೆಟ್ಟರ್, ಮಂಗಳಾ ಗೆಲುವಿಗಾಗಿ ಬಿಡುವಿಲ್ಲದೆ ಕ್ಷೇತ್ರದಲ್ಲಿ ಸಂಚರಿಸಿ ತಂತ್ರ ಹೆಣೆಯುತ್ತಿದ್ದಾರೆ. ಅತ್ತ ಸತೀಶ್ ಅರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಸಾಥ್ ನೀಡುತ್ತಿದ್ದಾರೆ.
ಸಿಗುವುದೇ ಮೊದಲ ಮಹಿಳಾ ಸಂಸದೆ ಪಟ್ಟ? :16ನೇ ಚುನಾವಣೆಗೆ ಸಾಕ್ಷಿಯಾಗುತ್ತಿರುವ ಬೆಳಗಾವಿ ಕ್ಷೇತ್ರಕ್ಕೆ ಈವರೆಗೆ ಮಹಿಳಾ ಅಭ್ಯರ್ಥಿ ಒಮ್ಮೆಯೂ ಗೆಲುವು ದಾಖಲಿಸಿಲ್ಲ. 2013ರ ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಅಂಗಡಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಕಣಕ್ಕಿಳಿದಿದ್ದರು.
ಬೆಳಗಾವಿಯ ಮೊದಲ ಸಂಸದೆ ಆಗಬೇಕೆಂದು ಕನಸು ಕಂಡಿದ್ದ ಹೆಬ್ಬಾಳ್ಕರ್‌ಗೆ ಕ್ಷೇತ್ರದ ಮತದಾರ ಕೈ ಹಿಡಿಯಲಿಲ್ಲ. ಆ ಚುನಾವಣೆಯಲ್ಲಿ ಸುರೇಶ್ ಅಂಗಡಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಇದೀಗ ದಿ.ಸುರೇಶ್ ಅಂಗಡಿ ಅವರ ಪತ್ನಿಯೇ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಅನುಕಂಪದ ಅಲೆ ಮಂಗಳಾ ಅವರ ಕೈ ಹಿಡಿದರೆ ಬೆಳಗಾವಿ ಕ್ಷೇತ್ರದ ಮೊದಲ ಮಹಿಳಾ ಸಂಸದೆ ಆಗಿ ಸಂಸತ್ ಪ್ರವೇಶಿಸಿ, ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಈವರೆಗೆ ಗೆದ್ದ ಅಭ್ಯರ್ಥಿಗಳಿವರು!:1957 ಹಾಗೂ 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ದಾತಾರ್ ಸತತ ಎರಡು ಸಲ ಗೆದ್ದಿದ್ದರು. ದಾತಾರ್ ಅವರ ಅಕಾಲಿಕ ನಿಧನದಿಂದ 1963ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ಕೌಜಲಗಿ ಜಯಿಸಿದ್ದರು.
ಓದಿ: ಮಾಸ್ಕ್ ಹಾಕಿಕೊಳ್ಳುವಂತೆ ಸಚಿವ ಕೆ.ಎಸ್.ಈಶ್ವರಪ್ಪಗೆ ಭದ್ರತಾ ಸಿಬ್ಬಂದಿ ಮನವಿ-VIDEO
1967ರಲ್ಲಿ ಎನ್ ಬಿ ನಬೀಸಾಬ್, 1971 ಹಾಗೂ 1977ರ ಚುನಾವಣೆಯಲ್ಲಿ ಎ ಕೆ ಕೊಟ್ರಶೆಟ್ಟಿ ಸತತ ಎರಡು ಸಲ ಗೆಲುವು ದಾಖಲಿಸಿದ್ದರು. 1980, 1984, 1989 ಹಾಗೂ 1991ರ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ನಾಲ್ಕು ಸಲ ಕಾಂಗ್ರೆಸ್ ಅಭ್ಯರ್ಥಿ ಎಸ್ ಬಿ ಸಿದ್ನಾಳ್‌ಗೆ ಜಯ ಸಿಕ್ಕಿತ್ತು.
1996ರಲ್ಲಿ ಜೆಡಿಎಸ್ ಅಭ್ಯರ್ಥಿ ಶಿವಾನಂದ ಕೌಜಲಗಿ ಗೆದ್ದಿದ್ದರು. 1998ರಲ್ಲಿ ಬಿಜೆಪಿ ಅಭ್ಯರ್ಥಿ ಬಾಬಾಗೌಡ ಪಾಟೀಲ ಗೆದ್ದು ಮಂತ್ರಿಯಾಗಿದ್ದರು. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರಸಿಂಹ ಪಾಟೀಲ ಗೆದ್ದಿದ್ದರು. ನಂತರ 2004, 2009, 2013 ಹಾಗೂ 2019ರ ಚುನಾವಣೆಯಲ್ಲಿ ಸತತ ನಾಲ್ಕು ಸಾರಿಯ ಬಿಜೆಪಿಯ ಸುರೇಶ್ ಅಂಗಡಿ ಗೆಲುವು ದಾಖಲಿಸಿದ್ದರು.
ನರೇಂದ್ರ ಮೋದಿ ನೇತೃತ್ವದ ಹಾಲಿ ಸರ್ಕಾರದಲ್ಲಿ ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಕೊರೊನಾಗೆ ಸುರೇಶ್ ಅಂಗಡಿ ಬಲಿಯಾದ ಹಿನ್ನೆಲೆ ಈಗ ಉಪಚುನಾವಣೆ ನಡೆಯುತ್ತಿದೆ.