ಬೆಳಗಾವಿ:ಸಂಪುಟ ಪುನಾರಚನೆ ಕುರಿತಾದ ಚರ್ಚೆಗಳು ತೀವ್ರಗೊಳ್ಳುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯ ಸಚಿವಾಕಾಂಕ್ಷಿಗಳು ಬಸವರಾಜ್ ಬೊಮ್ಮಾಯಿ ಸಂಪುಟ ಸೇರಲು ಕಸರತ್ತು ಆರಂಭಿಸಿದ್ದಾರೆ. ಆರ್‌ಎಸ್ಎಸ್ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಸಂಪುಟ ಸೇರುವ ಉತ್ಸಾಹದಲ್ಲಿದ್ದಾರೆ. ಮತ್ತೊಂದೆಡೆ ಸಚಿವ ಸ್ಥಾನ ಉಳಿಸಿಕೊಳ್ಳಲು ಉಮೇಶ ಕತ್ತಿ ಹಾಗೂ ಶಶಿಕಲಾ ಜೊಲ್ಲೆ ಶತಪ್ರಯತ್ನ ನಡೆಸಿದ್ದಾರೆ.
ಗುರುವಾರ ಬೆಳಗಾವಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೂ ಸಚಿವಾಕಾಂಕ್ಷಿಗಳು ಭೇಟಿಯಾಗಿ ಲಾಬಿ ಮಾಡಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಈವರೆಗೂ ಸಚಿವರಾಗಿಲ್ಲ. ಪಕ್ಷ ತೊರೆದು ಬಿಜೆಪಿ ಸೇರಿದ್ದ ಉಳಿದೆಲ್ಲ 17 ಶಾಸಕರ ಪೈಕಿ 15 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೀಗಾಗಿ ಈ ಸಲವಾದರೂ ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು ಎಂದು ಮಹೇಶ ಕುಮಟಳ್ಳಿ ಪಟ್ಟು ಹಿಡಿದಿದ್ದಾರೆ.
ಮತ್ತೆ ಮಂತ್ರಿಗಿರಿಗೆ ಕಸರತ್ತು:ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಈ ಹಿಂದೆ ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದರು. ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಲ್ಲಿ ರಾಜೀನಾಮೆ ನೀಡಿದರೆ, ನಾಯಕತ್ವ ಬದಲಾವಣೆ ನಂತರ ಆದ ಸಂಪುಟ ರಚನೆಯ ವೇಳೆ ಶ್ರೀಮಂತ ಪಾಟೀಲ ಹಾಗೂ ಡಿಸಿಎಂ ಆಗಿದ್ದ ಲಕ್ಷಣ ಸವದಿ ಅವರನ್ನು ಕೈಬಿಡಲಾಯಿತು.