ಬೆಳಗಾವಿ: ಕುಂದಾನಗರಿ ಜನರ ಬಹುದಿನದ ಕನಸೊಂದು ಇಂದು ನನಸಾಯಿತು. ಬಹುನಿರೀಕ್ಷಿತ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿಗಾಗಿ ಈ ಭಾಗದ ಜನರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದರು. ಸುರೇಶ ಅಂಗಡಿ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಒಂದೇ ತಿಂಗಳಲ್ಲಿ ಈ ಭಾಗದ ಜನರ ಕನಸು ನನಸಾಗಿದೆ.
ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ತೋರುವ ಮೂಲಕ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಇಂದಿನಿಂದ ಕಾರ್ಯಾರಂಭ ಮಾಡಿದ ರೈಲ್‌ನ ಹೂವಿನಿಂದ ಅಲಂಕರಿಸಲಾಗಿತ್ತು. ಇದಕ್ಕೂ ಮೊದಲು ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಸುರೇಶ ಅಂಗಡಿ, ಬೆಳಗಾವಿ ದೊಡ್ಡ ಜಿಲ್ಲೆಯಾದರೂ ಇಲ್ಲಿನ ರಾಜಕೀಯ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಇರುವುದು ಬೇಸರದ ಸಂಗತಿ. ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದಿಂದ ಮೇಲೆದ್ದು, ಬ್ರಿಟೀಷರ ವಿರುದ್ಧ ಹೋರಾಡಿದಳು. ಆಕೆಯ ಸಾಹಸ, ಶೌರ್ಯ ನಮಗೆ ಮಾದರಿಯಾಗಬೇಕಿತ್ತು. ಆದರೆ, 20 ವರ್ಷಗಳಿಂದ ನಾವು ಒಗ್ಗಟ್ಟಿನಿಂದ ಕೆಲಸ ಮಾಡಲು ವಿಫಲರಾಗಿದ್ದೇವೆ. ನೆರೆಯ ಧಾರವಾಡ ಜಿಲ್ಲೆಯ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಜತೆಗೆ ಒಗ್ಗಟ್ಟು ಇದೆ. ಬೆಳಗಾವಿಯಲ್ಲಿ ಅತಿಹೆಚ್ಚು ಕಬ್ಬು ಬೆಳೆದು, ಸಕ್ಕರೆ ಉತ್ಪಾದನೆ ಮಾಡಲಾಗುತ್ತಿದೆ. ನಾವು ಸಕ್ಕರೆ ಕೊಡದಿದ್ದರೆ ಬೆಂಗಳೂರಿನವರು ಚಹಾ ಕುಡಿಯುವುದಿಲ್ಲ. ನಾವು ಸೌಮ್ಯವಾದಿಗಳು. ರಾಜಕೀಯ ಇಚ್ಛಾಶಕ್ತಿ ಇದ್ದರೆ ಎಲ್ಲವನ್ನೂ ಸಾಧಿಸಬಹುದು ಎಂದು ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಒಂದು ತಿಂಗಳ ಕಾಲ ಅಧಿವೇಶನ ನಡೆಯಬೇಕು. ಅಧಿವೇಶನದ ಲಾಭ ಉತ್ತರಕರ್ನಾಟಕ ಭಾಗದ ಜನರಿಗೆ ದೊರೆಯಬೇಕು. ಮುಂದಿನ ಎಲ್ಲ ರೈಲ್ವೆ ಇಲಾಖೆಯ ಸಭೆಗಳನ್ನೂ ಇಲ್ಲಿನ ಸುವರ್ಣಸೌಧದಲ್ಲಿ ನಡೆಸಲಾಗುವುದು ಎಂದರು.