ಬೆಳಗಾವಿ: ಕಳೆದ ಎರಡು ವರ್ಷಗಳ ಹಿಂದಷ್ಟೇ ಅವ್ಯವಸ್ಥೆ ಸೇರಿ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿದ್ದ ಬೆಳಗಾವಿ ಬಿಮ್ಸ್ ಇದೀಗ ಉತ್ತಮ ಮೂಲಸೌಕರ್ಯ, ಆಡಳಿತ ಹಾಗೂ ರೋಗಿಗಳಿಗೆ ಉತ್ತಮ ಸೌಲಭ್ಯ ಒದಗಿಸಿದ್ದಕ್ಕಾಗಿ ದೇಶದ 270ಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳ ಪೈಕಿ 12ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಪಾತ್ರವಾಗಿದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಲ್ಲಾಸ್ಪತ್ರೆ) ಕೋವಿಡ್ ಸೇರಿದಂತೆ ಇತರ ಸಂದರ್ಭದಲ್ಲಿ ಅವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿತ್ತು. ಆದರೀಗ ಹದಗೆಟ್ಟ ವ್ಯವಸ್ಥೆಯನ್ನೇ ನಿರೀಕ್ಷೆಗೂ ಮೀರಿದ ವೇಗದಲ್ಲಿ ಸರಿಪಡಿಸಿಕೊಂಡ ಶ್ರೇಯಸ್ಸು ಬಿಮ್ಸ್ ಗೆ ಸಿಕ್ಕಿದೆ.
ವೈದ್ಯಕೀಯ ಸಂಸ್ಥೆ ಬಿಮ್ಸ್ ಗೆ ಕರ್ನಾಟಕದಲ್ಲಿ ಮೊದಲ ಸ್ಥಾನ:ಜುಲೈ 2022ರಲ್ಲಿ ಪ್ರಕಟವಾದ ಔಟ್ ಲುಕ್ ಮ್ಯಾಗಜಿನ್ ಹೊರಡಿಸಿದ ಐಕೇರ್ ದೇಶದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ರ್ಯಾಂಕಿಂಗ್ನಲ್ಲಿ ಬಿಮ್ಸ್‌ಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಸಿಕ್ಕಿದ್ದರೆ, ದೇಶದಲ್ಲಿ 12ನೇ ಸ್ಥಾನ ಒದಗಿದೆ. ಔಟ್ ಲುಕ್ ನೀಡಿರುವ ರ‍್ಯಾಂಕಿಂಗ್ ಅನ್ವಯ ಬಿಮ್ಸ್‌ಗೆ ಶೈಕ್ಷಣಿಕ ಮಟ್ಟದಲ್ಲಿ ಏಂಟನೇ ಸ್ಥಾನ, ಮೂಲಭೂತ ಸೌಕರ್ಯಗಳಲ್ಲಿ 5ನೇ ಸ್ಥಾನ, ಆಡಳಿತ ಹಾಗೂ ಪ್ರವೇಶಾತಿಯಲ್ಲಿ 12ನೇ ಸ್ಥಾನ ಪಡೆದುಕೊಂಡಿದೆ.