ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅಷ್ಟೂ ಅತೃಪ್ತ ಶಾಸಕರ ರಾಜೀನಾಮೆಯನ್ನು ತಕ್ಷಣವೇ ಸ್ಪೀಕರ್ ರಮೇಶಕುಮಾರ್ ಅಂಗೀಕರಿಸಬೇಕು. ಮತ್ತು ಕುಮಾರಸ್ವಾಮಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದೇ ಸೂಕ್ತವೆಮದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಇದನ್ನು ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಶಾಸಕರ ಈ ನಡೆಯನ್ನು ಗಮನಿಸಿದ್ರೆ ಸಿಎಂ ಮೇಲೆ ವಿಶ್ವಾಸ ಇಲ್ಲ ಅನ್ನೋದನ್ನು ತೋರಿಸುತ್ತದೆ. ಹಾಗಾಗಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದರು.
ಸಿಎಂ ಸ್ಥಾನಕ್ಕೆ ಹೆಚ್ಡಿಕೆ ರಾಜೀನಾಮೆ ಕೊಡುವುದು ಸೂಕ್ತ: ಹೊರಟ್ಟಿ ಅಲ್ಲದೆ, ಅಮೆರಿಕ ಪ್ರವಾಸದಲ್ಲಿರುವ ಸಿಎಂ ಇಂದು ಸಂಜೆ ಬೆಂಗಳೂರಿಗೆ ಬರಲಿದ್ದಾರೆ. ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆ ಹಿಂದೆ ಒಬ್ಬರಲ್ಲ, ಹಲವರ ಕೈವಾಡ ಇದೆ. ಅತೃಪ್ತ ಮೈತ್ರಿ ಪಕ್ಷಗಳ ಶಾಸಕರ ಮನವೊಲಿಸುವುದು ಸೂಕ್ತವಲ್ಲ. ಈ ಬಾರಿ ರಾಜೀನಾಮೆ ಕೊಡುವಾಗ ಹೊಸದೊಂದು ಪದ್ಧತಿಯನ್ನು ನೋಡಿದ್ದೇನೆ. ಇಲ್ಲಿಯವರೆಗೆ ರಾಜ್ಯದಲ್ಲಿ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸುವ ಪರಂಪರೆ ಇತ್ತು. ಕೆಲವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಾನು ಜೆಡಿಎಸ್ ನಲ್ಲೇ ಇರುತ್ತೇನೆ. ಶಿಕ್ಷಕರ ಆಶೀರ್ವಾದ ಇರುವ ತನಕ ಪರಿಷತ್ ಸದಸ್ಯನಾಗೇ ಇರುತ್ತೇನೆ ಎಂದು ಹೇಳಿದರು.
ಒಂದು ವೇಳೆ ಬಿಜೆಪಿ ಸರ್ಕಾರ ರಚಿಸಿದರೆ ಅಲ್ಲಿಯೂ ಅಸಮಾಧಾನ ಹೊಗೆ ಆಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವಿಸರ್ಜಿಸಿ ವಿಧಾನಸಭೆ ಮಧ್ಯಂತರ ಚುನಾವಣೆಗೆ ಹೋಗುವುದು ಸೂಕ್ತವೆಂದು ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.