ಬೆಳಗಾವಿ:ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ಮಹದಾಯಿ ವಿಚಾರದಲ್ಲಿ ರಾಜಕಾರಣ ಮಾಡಿವೆ. ಇನ್ನಾದರೂ ಎಲ್ಲಾ ಪಕ್ಷಗಳು ಈ ವಿಚಾರದಲ್ಲಿ ರಾಜಕಾರಣ ಮಾಡದೇ ಜನರಿಗೆ ಮಹದಾಯಿ ನೀರನ್ನು ಒದಗಿಸಲು ಪ್ರಯತ್ನಿಸಬೇಕಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಕನ್ನಡ ಪರ, ರೈತ ಸಂಘಟನೆಗಳು ಒಗ್ಗೂಡಿವೆ. ರಾಜಕೀಯ ಪಕ್ಷಗಳು ಕೂಡ ಈ ಯೋಜನೆ ಜಾರಿಗೆಗೆ ಪ್ರಯತ್ನಿಸಬೇಕಿದೆ. ಮಹದಾಯಿ ವಿಚಾರದಲ್ಲಿ ಇಷ್ಟು ದಿನ ರಾಜಕಾರಣ ಮಾಡಿದ್ದು ಸಾಕು. ಇನ್ನು ಮುಂದೆ ಹಾಗಾಗಲ್ಲ. ಯೋಜನೆ ಜಾರಿ ವಿಚಾರದಲ್ಲಿ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯಲ್ಲಿ ಸಭೆ ನಡೆಸಿ ಹೋರಾಟದ ರೂಪುರೇಷ ಸಿದ್ಧಪಡಿಸಲಾಗುವುದು ಎಂದರು.
ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಪದೇ ಪದೆ ಅನ್ಯಾಯ ಮಾಡುತ್ತಿದೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಯೋಜನೆ ಜಾರಿಗೆ ಬಿಜೆಪಿ ಪ್ರಯತ್ನಿಸಬೇಕು. ಕರ್ನಾಟಕದ ಜನತೆ 25 ಜನರನ್ನು ಸಂಸತ್ತಿಗೆ ಕಳಿಸಿದೆ. ಹೀಗಾಗಿ ಕೇಂದ್ರದ ಬಿಜೆಪಿ ರಾಜ್ಯಕ್ಕೆ ಅನ್ಯಾಯ ಮಾಡಬಾರದು ಎಂದು ಮನವಿ ಮಾಡಿದರು.
ಮಹದಾಯಿ ನ್ಯಾಯಾಧಿಕರಣ ತೀರ್ಪಿನಂತೆ ನಮ್ಮ ಪಾಲಿನ ನೀರಿನ ಬಳಕೆ ಆಗಬೇಕು. ಇದಕ್ಕಾಗಿ ನಾಲಾ ನಿರ್ಮಿಸಬೇಕಿದ್ದು, ಯೋಜನೆ ಜಾರಿಗೆ ಹೋರಾಟದ ಅಗತ್ಯತೆ ಇದೆ. ಆದ್ರೆ ಕೇಂದ್ರದ ಪರಿಸರ ಇಲಾಖೆ ರಾಜ್ಯದ ಹಿತಾಸಕ್ತಿ ವಿರುದ್ಧ ನಡೆದುಕೊಳ್ಳುತ್ತಿದೆ. ಈ ವಿಚಾರವನ್ನು ರಾಜಕೀಯಕ್ಕೆ ಬಳಸುತ್ತಿರುವ ಸಂಗತಿಯನ್ನು ಗೋವಾ ರಾಜ್ಯಪಾಲರು ಬಹಿರಂಗಪಡಿಸಿದ್ದಾರೆ. ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತು ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಮಹದಾಯಿ ಹೋರಾಟಗಾರರ ಸಭೆ: ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಹದಾಯಿ ಹೋರಾಟಗಾರರು ಸಭೆ ನಡೆಸಿ ಮಾಹಿತಿ ಪಡೆಯಲಾಯಿತು. ರೈತ ಮುಖಂಡರು, ಕನ್ನಡ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು. ಯೋಜನೆ ಜಾರಿ ಸಂಬಂಧ ಹಮ್ಮಿಕೊಳ್ಳಬೇಕಾದ ಹೋರಾಟದ ಬಗ್ಗೆ ಅಭಿಪ್ರಾಯ ಪಡೆಯಲಾಯಿತು.