ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಅಕ್ಟೋಬರ್ 1 ರಿಂದ ಸಮಾಜದ ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ಧರಣಿ ನಡೆಸುವುದಾಗಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಪಂಚಮಸಾಲಿ ಹೋರಾಟಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೂ, ಅಕ್ಟೋಬರ್ 1 ರಿಂದ ಮಕ್ಕಳ ಜೊತೆಗೆ ಧರಣಿ ಮಾಡುತ್ತೇವೆ. ನಾನು ಮಠ ಬಿಟ್ಟು 30 ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಸಮಾಜಕ್ಕೆ ಒಳ್ಳೆಯದಾಗಬೇಕೆಂದು ಹೋರಾಟ ನಡೆಸುತ್ತಿದ್ದೇನೆ ಎಂದರು.
ಆದರೆ, ನಮ್ಮದೇ ಸಮಾಜದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಅವರೆಲ್ಲರೂ ನಮ್ಮವರೇ ಎಂದು ನಾವು ಭಾವಿಸಿದ್ದೇವೆ. ಯತ್ನಾಳ್ ಗೌಡರ ಮೇಲೆ ಸಿಟ್ಟು ಇದ್ರೆ ಅವರ ವಿರುದ್ಧ ಸ್ಪರ್ಧೆ ಮಾಡಿ ಗೆದ್ದು ಬನ್ನಿ. ಕಾಶಪ್ಪನವರ ಮೇಲೆ ಸಿಟ್ಟಿದ್ರೆ ಅವರನ್ನು ಸ್ಪರ್ಧೆ ಮಾಡಿ ಗೆದ್ದು ಬನ್ನಿ. ಸಮಾಜಕ್ಕಾಗಿ ನಾವೆಲ್ಲಾ ಹೋರಾಟ ಮಾಡುತ್ತಿದ್ದೇವೆ.
ಕೆಲವು ಅತೃಪ್ತ ಆತ್ಮಗಳು ಇವೆ. ರಾಜಕೀಯ ಏಳಿಗೆ ಸಹಿಸದವರು ಕೆಲವರಿದ್ದಾರೆ. ಸ್ವಾಮೀಜಿಗಳ ಏಳಿಗೆ ಸಹಿಸದೇ ಇರೋರು ಸಹ ಇದ್ದಾರೆ. ನಾನು ಹೋರಾಟ ಮಾಡಬಾರದು ಎಂದು ಕೆಲವರ ಹೇಳುತ್ತಿದ್ದಾರೆ. ನನ್ನ ಹೋರಾಟದಲ್ಲಿ ಸ್ವಾರ್ಥವಿದ್ದರೆ ಇಂದೇ ನಾನು ಹೋರಾಟ ಕೈಬಿಡುತ್ತೇನೆ. ಈ ಹಸಿರು ಶಾಲು ನಿಮ್ಮ ಕೊರಳಿಗೆ ಹಾಕುತ್ತೇನೆ. ಮೀಸಲಾತಿಗೆ ಹೋರಾಟ ಮಾಡುವವರಿಗೆ ನೇತೃತ್ವವಹಿಸಿ ಕೊಡುವೆ. ಯತ್ನಾಳ, ಕಾಶಪ್ಪನವರ್ ಹೋರಾಟ ಮಾಡಬಾರದು ಎನ್ನುತ್ತೀರಿ. ನೀವೂ ಹೋರಾಟ ಮಾಡಲ್ಲ, ಮಾಡೋವರಿಗೆ ಮಾಡಬೇಡಿ ಅಂತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.