ಬೆಳಗಾವಿ:ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ಇಡೀ ಪಂಚಮಸಾಲಿ ಸಮುದಾಯಕ್ಕೆ ನಿರಾಶೆ ಉಂಟುಮಾಡಿದೆ. ಪಕ್ಷದಲ್ಲಿ ದುಡಿಯುತ್ತಿರುವ ಪಂಚಮಸಾಲಿ ಸಮುದಾಯದ ಬಿಜೆಪಿ ಕಾರ್ಯಕರ್ತರು, ನಾಯಕರ ಬಗ್ಗೆ ಅಗೌರವದಿಂದ ಅವಹೇಳನಕರವಾಗಿ ಮಾತನಾಡಬಾರದು. ಈ ಕುರಿತು ನಳಿನ್ ಕುಮಾರ್ ಕಟೀಲ್ ಅವರು ಅರುಣ್ ಸಿಂಗ್ ಅವರಿಗೆ ತಾಕೀತು ಮಾಡಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮಂತ್ರಿಸ್ಥಾನ ತ್ಯಾಗ ಮಾಡಿ ಹೋರಾಟಕ್ಕೆ ಬಂದ ಯತ್ನಾಳ್:ನಗರದಲ್ಲಿ ನಡೆದ ಮಾಧ್ಯಮದಗೋಷ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಶಾಸಕರು, ನಾಯಕರಲ್ಲ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರಕ್ಕೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು. ಬಸನಗೌಡ ಪಾಟೀಲ್ ಯತ್ನಾಳ್‌ರಿಗೆ ಕಮಿಟ್‌ಮೆಂಟ್ ಇದೆ. ಮಂತ್ರಿಸ್ಥಾನ ತ್ಯಾಗ ಮಾಡಿ ಹೋರಾಟಕ್ಕೆ ನಿಂತುಕೊಂಡಿದ್ದಾರೆ. ಅವರಿಗೆ ಎಷ್ಟೇ ತೊಂದರೆ ಅಡೆ ತಡೆ ಬಂದರೂ ಪಕ್ಷದಲ್ಲಿ ಏನೇ ಟೀಕೆ ಬಂದರೂ, ಅವರು ಪಕ್ಷದ ಒಳಗೆ ಇದ್ದು ಏನು ಕೆಲಸ ಮಾಡಬೇಕೋ ಅದನ್ನು ಮಾಡ್ತಿದ್ದಾರೆ.
ಮಂತ್ರಿ ಸ್ಥಾನ ಬೇಡ ಮೀಸಲಾತಿ ಬೇಕು ಅನ್ನೋ ಕಮಿಟ್‌ಮೆಂಟ್ ಅವರಿಗೆ ಇದೆ. ಆ ಕಮಿಟ್‌ಮೆಂಟ್ ಎಲ್ಲರಿಗೂ ಬರೋಕೆ ಸಾಧ್ಯವಿಲ್ಲ. ಅರುಣ್ ಸಿಂಗ್ ಅವರಿಗೆ ಪಾಪ ಕರ್ನಾಟಕದ ಬಗ್ಗೆ ಗೊತ್ತಿಲ್ಲ. ಯಾರು ನಾಯಕರು ಅಂತಾ ಕರ್ನಾಟಕದ 7 ಕೋಟಿ ಕನ್ನಡಿಗರಿಗೆ ಗೊತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ ನಿರಾಶೆ: ಅರುಣ್ ಸಿಂಗ್ಗಿಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ನಾನು ಮನವಿ ಮಾಡ್ತೇನೆ, ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಬಿಜೆಪಿ ಕಾರ್ಯಕರ್ತನನ್ನು ನಾಯಕ ಅಂತಾ ಗೌರವಿಸುತ್ತಾರೆ. ಸ್ವತಃ ಪ್ರಧಾನಮಂತ್ರಿ ಇದ್ದರೂ ಸಹ ನಾನು ಪ್ರಧಾನ ಸೇವಕ ಅಂತಾ ಹೇಳ್ತಾರೆ. ಬಿಜೆಪಿಯಲ್ಲಿರುವ 80 ಪರ್ಸೆಂಟ್ ಪಂಚಮಸಾಲಿಗಳು ಪಕ್ಷ ಕಟ್ಟುವಲ್ಲಿ ದುಡಿದಿದ್ದಾರೆ. ಆ ಸಮುದಾಯದ ನಾಯಕರನ್ನು ಯಾರೂ ಸಹ ಅಗೌರವದಿಂದ ಕಾಣಬಾರದು. ಆದ್ರೆ, ನಿನ್ನೆಯ ಅರುಣ್‌ಸಿಂಗ್ ಹೇಳಿಕೆ ಇಡೀ ಪಂಚಮಸಾಲಿ ಸಮುದಾಯಕ್ಕೆ ನಿರಾಶೆ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅರುಣ್ ಸಿಂಗ್ ಹೇಳಿಕೆ ಹಿಂಪಡೆಯಲಿ:ಪಂಚಮಸಾಲಿ ಸಮುದಾಯದ ಜನ ಬಹಳ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದಾರೆ. ಒಂದು ಕಡೆ ಯತ್ನಾಳ್ ಗೌಡರ ಬಗ್ಗೆ ಮಾತನಾಡಿದ್ದಾರೆ. ಅರವಿಂದ ಬೆಲ್ಲದ ಬಗ್ಗೆಯೂ ಮಾತನಾಡಿದ್ದಾರೆ. ನಮ್ಮ ಸಮಾಜದವರು ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಪಕ್ಷದಲ್ಲಿ ದುಡಿಯುತ್ತಿರುವ ಪಂಚಮಸಾಲಿ ಸಮುದಾಯದ ಬಿಜೆಪಿ ಕಾರ್ಯಕರ್ತರು, ನಾಯಕರ ಬಗ್ಗೆ ಅಗೌರವದಿಂದ ಅವಹೇಳನಕರವಾಗಿ ಮಾತನಾಡಬಾರದು. ನಳಿನ್ ಕುಮಾರ್ ಕಟೀಲ್‌ರವರು ಅರುಣ್ ಸಿಂಗ್‌ಗೆ ತಾಕೀತು ಮಾಡಬೇಕು. ಅರುಣ್ ಸಿಂಗ್‌ರವರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.