ಕರ್ನಾಟಕ

karnataka

ETV Bharat / state

ಪಂಚಮಸಾಲಿ ಶಾಸಕರ ಸಭೆ: ಸಿಎಂ ಜೊತೆ ಸಭೆ ಬಳಿಕ‌ ಮುಂದಿನ ನಿರ್ಧಾರ- ಬಸವಜಯ ಮೃತ್ಯುಂಜಯ ಶ್ರೀ - ಪಂಚಮಸಾಲಿ ಶಾಸಕರ ಸಭೆ

Panchmasali MLA's meeting: ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Basavajaya Mrityunjaya Swamiji Pressmeet
ಸುದ್ದಿಗೋಷ್ಠಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು

By ETV Bharat Karnataka Team

Published : Dec 5, 2023, 9:45 PM IST

Updated : Dec 5, 2023, 10:29 PM IST

ಸುದ್ದಿಗೋಷ್ಠಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ ಶೀಘ್ರವೇ ಮೀಸಲಾತಿ ಕೊಡುತ್ತದೆ ಎನ್ನುವ ಭರವಸೆ ಇದೆ. ಎಲ್ಲಾ ಪಕ್ಷಗಳಿಗೂ ಪಂಚಮಸಾಲಿ ಮತಗಳು ಬೇಕು. ಹೀಗಾಗಿ ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಇಂದು ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಸರ್ವಪಕ್ಷಗಳ ಪಂಚಮಸಾಲಿ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಸರ್ಕಾರ ರಚನೆಯಾದ ತಕ್ಷಣವೇ ನಮ್ಮ ಶಾಸಕರನ್ನು ಭೇಟಿಯಾಗಿ ಚರ್ಚಿಸಿದ್ದೆವು. ಸರ್ಕಾರ ಈಗಷ್ಟೇ ರಚನೆಯಾಗಿದ್ದರಿಂದ ಶಾಂತವಾಗಿ ಹೋರಾಟ ಮಾಡೋಣ ಎಂದು ನಿರ್ಧಾರ ಮಾಡಿದ್ದೆವು. ಇದೀಗ ನಮ್ಮ ಶಾಸಕರ ಅಭಿಪ್ರಾಯದ ಮೇರೆಗೆ ಅಧಿವೇಶನದಲ್ಲಿ ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದರು.

ನಮ್ಮ ಸಮಾಜದ ಸಭೆಗೆ ಸಿಎಂ ಅವರನ್ನು ಆಹ್ವಾನಿಸುತ್ತೇವೆ. ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಕುರಿತು ಸಭೆ ಮಾಡಲಿದ್ದೇವೆ.‌ ಸಿಎಂ ಜತೆಗೆ ಸಭೆ ಮಾಡಿದ ನಂತರವೇ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. ಸಿಎಂ ಜತೆಗೆ ಸಭೆ ಮಾಡದೇ ಹೋರಾಟ ಮಾಡುವುದು ಸರಿಯಲ್ಲ ಎಂಬ ಸಲಹೆಗಳು ಬಂದಿವೆ. ನಾಳೆ ಅಥವಾ ನಾಡಿದ್ದು ಸಿಎಂ ನೇತೃತ್ವದಲ್ಲಿ ಸಭೆ ಮಾಡಿದ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಣಯಿಸುತ್ತೇವೆ. ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದು, ಲೋಕಸಭೆ ಚುನಾವಣೆ ಒಳಗೆ ಮೀಸಲಾತಿ ಘೋಷಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಕಳೆದ ಬಾರಿಯ ರೀತಿಯ ಹೋರಾಟ ಆಗುತ್ತಿಲ್ಲ ಎಂಬ ಅರವಿಂದ ಬೆಲ್ಲದ ಅವರ ಮಾತಿನ ವಿಚಾರದ ಬಗ್ಗೆ ಮಾತನಾಡಿ, ಶಾಸಕರಿಗೆ ಒತ್ತಡ ಹಾಕುವ ಉದ್ದೇಶದಿಂದಲೇ ಸಭೆ ಕರೆದಿದ್ದೇವೆ. ಇನ್ನು ಯತ್ನಾಳ ಅವರು ಮುನಿಸಿಕೊಂಡಿಲ್ಲ. ಈಗಿನ ಶಾಸಕರು ಹೋರಾಟ ಮಾಡಬೇಕು ಎಂದಿದ್ದಾರೆ. ವಿಜಯಾನಂದ ಹಾಗೂ ವಿನಯ್ ಅವರನ್ನು ದೆಹಲಿಗೆ ರಾಹುಲ್ ಕರೆದಿದ್ದರು. ಆದಷ್ಟು ಬೇಗ ನಮ್ಮ ಮೀಸಲಾತಿ ಕೊಡಲು ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ರಾಹುಲ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮಲ್ಲಿ ಯಾವುದೇ ಕೆಡುಕು ಇಲ್ಲ, ಕೆಡುಕು ಹುಟ್ಟಿಸಬೇಡಿ. ನಾವು ಸರ್ಕಾರದ ಮಟ್ಟದಲ್ಲಿ ಮೀಸಲಾತಿಗೆ ಏನು ಮಾಡಬೇಕು ಅದನ್ನು ಮಾಡುತ್ತಿದ್ದೇವೆ. ಒಡಕು ಹುಟ್ಟಿಸುವವರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ಹಿಂದೆ ತಾಯಿಯ ಮೇಲೆ ಆಣೆ ಮಾಡಿದ್ದರಿಂದ ನಂಬಿದ್ದೆವು. ಆದರೆ ಈಗ ಆಣೆ ಮಾಡಿದವರ ಸರ್ಕಾರ ಇಲ್ಲ ಎಂದು ಪರೋಕ್ಷವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟರು.

ಸಭೆಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್​, ಶಾಸಕ ಅರವಿಂದ ಬೆಲ್ಲದ ಸೇರಿ ಮತ್ತಿತರರು ಭಾಗಿಯಾಗಿದ್ದರು.

ಇದನ್ನೂ ಓದಿ:2ಎ ಮೀಸಲಾತಿ ಫೈಟ್.. ಡಿ.5ರಂದು ಬೆಳಗಾವಿಯಲ್ಲಿ ಸಮಾಜದ ಹಾಲಿ - ಮಾಜಿ ಶಾಸಕರ ಸಭೆ; ಬಸವಜಯ ಶ್ರೀ ಮಾಹಿತಿ

Last Updated : Dec 5, 2023, 10:29 PM IST

ABOUT THE AUTHOR

...view details