ಬೆಳಗಾವಿ :ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ಗಾಂಧಿಭವನದಲ್ಲಿ ನಡೆದ ಅಖಿಲ ಕರ್ನಾಟಕ ರಾಜ್ಯಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಮಹತ್ವದ ಮೂರು ನಿರ್ಣಯ ಕೈಗೊಳ್ಳಲಾಯಿತು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಒತ್ತಾಯ ಕೇಳಿ ಬಂದಿವೆ.
ಕಳೆದ ಒಂದು ವರ್ಷದಿಂದ ನಿರಂತರವಾಗಿ ಮೀಸಲಾತಿಗಾಗಿ ಹೋರಾಟ ನಡೆದಿದೆ. ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಮೂರು ನಿರ್ಣಯ ಕೈಗೊಂಡಿದ್ದೇವೆ ಎಂದರು.
ಬಜೆಟ್ ಮುನ್ನವೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಬಜೆಟ್ ಅಧಿವೇಶನದೊಳಗೆ ಮೀಸಲಾತಿ ನೀಡಬೇಕು.
ಸಮಾಜ ಒಡೆಯುತ್ತಿರುವ ಕುತಂತ್ರಿಗಳನ್ನು ನಿರ್ಲಕ್ಷ್ಯಿಸುವುದು ಹಾಗೂ ಸಚಿವ ಮುರಗೇಶ್ ನಿರಾಣಿ ಹೆಸರಲ್ಲಿ ಕೂಡಲಸಂಗಮ ಶ್ರೀಪೀಠಕ್ಕೆ ಕೊಟ್ಟಂತ ವಸ್ತುಗಳನ್ನು ಅವರ ಮನೆಗೆ ವಾಪಸ್ ಕೊಡಲು ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲರ ಸಲಹೆಗಳನ್ನು ಪರಿಗಣಿಸಿ ಈ ಮೂರು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ರೊಟ್ಟಿ-ಬಟ್ಟೆ ಕೊಟ್ಟಿದ್ದಾರೆ :ಮುರಗೇಶ ನಿರಾಣಿ ಅವರಿಗೆ ಸೇರಿದ ಫೇಸ್ಬುಕ್ ಪೇಜ್ನಲ್ಲಿ ಶ್ರೀಪೀಠಕ್ಕೆ ರೊಟ್ಟಿ, ಬಟ್ಟೆ, ಕಸಬರಗಿ ಕೊಟ್ಟಿರುವುದಾಗಿ ಪೋಸ್ಟ್ ಮಾಡಲಾಗುತ್ತಿದೆ. ಅದನ್ನು ಮರಳಿಸಲು ನಿರ್ಧರಿಸಿದ್ದೇನೆ. ಶ್ರೀಪೀಠಕ್ಕೆ ಎಲ್ಲರೂ ದಾನ-ಧರ್ಮ ಕೊಟ್ಟಿದ್ದಾರೆ. ಆದರೆ, ನಿರಾಣಿ ಹೆಸರಲ್ಲಿರುವ ಪೋಸ್ಟ್‌ಗಳಲ್ಲಿ ಸ್ವಾಮೀಜಿ ನಮ್ಮ ಋಣದಲ್ಲಿದ್ದಾರೆ ಅಂತಾ ಪದೇಪದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದು ನಮ್ಮ ಪಂಚಮಸಾಲಿ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದರು.