ಬೆಳಗಾವಿ: ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ. ಇದು ಐದು ವರ್ಷ ನಡೆಯುವ ಸರ್ಕಾರ ಅಲ್ಲಾ. ಲೋಕಸಭಾ ಚುನಾವಣೆ ಮುನ್ನ ಇಲ್ಲವೇ, ಚುನಾವಣೆ ಬಳಿಕ ಆ್ಯಕ್ಸಿಡೆಂಟ್ ಆಗಿ ಈ ಸರ್ಕಾರ ಬೀಳುತ್ತದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಗಾಂಧಿ ಭವನದಲ್ಲಿ ಇಂದು ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಏನಾಗಿದೆ ಎಲ್ಲರಿಗೂ ಗೊತ್ತು. ಯಾರು ಯಾರನ್ನ ಸೋಲಿಸಲು ಯತ್ನಿಸಿದ್ದಾರೆ ಅಂತಾ ಕಾರ್ಯಕರ್ತರಿಗೆ ಗೊತ್ತಿದೆ. ಕಾರ್ಯಕರ್ತರ ಭಾವನೆಯನ್ನ ಕೇಳದಿದ್ರೇ ಇದೇ ಗತಿ ಆಗೋದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ತಾಸು ಕುಳಿತು ಬೊಮ್ಮಾಯಿ ಅವರು ಸಭೆ ಮಾಡಬೇಕು ಎಂದ ಯತ್ನಾಳ್, ವಿಜಯಪುರದಲ್ಲಿ ನನ್ನ ಚುನಾವಣೆ ಅಷ್ಟು ಸುಲಭ ಇರಲಿಲ್ಲ. ನನ್ನನ್ನ ಸೋಲಿಸಲು ಬಂದವರು ತಾವೇ ಸೋತರೂ ಎನ್ನುವ ಮೂಲಕ ಪರೋಕ್ಷವಾಗಿ ವೇದಿಕೆ ಮೇಲಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಟಾಂಗ್ ಕೊಟ್ಟರು.
ಹಿಂದುಗಳ ಧ್ವನಿಯನ್ನ ಕುಗ್ಗಿಸುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರನ್ನ ಸೋಲಿಸಿದರು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಬಗ್ಗೆ ಅಪಪ್ರಚಾರ ಮಾಡಿದರು. ದೇಶ ಉಳಿಯಬೇಕು, ಹಿಂದುಗಳು ಸುರಕ್ಷಿತವಾಗಿ ಇರಬೇಕು ಅಂದ್ರೇ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆದ್ದು ಪ್ರಧಾನಿಗೆ ಗೌರವ ಕೊಡಬೇಕಿದೆ. ಪಾಟ್ನಾದಲ್ಲಿ ಮೊನ್ನೆ ಕೆಲವರು ಸಭೆ ಮಾಡಿದ್ದರು. ಪಾಕಿಸ್ತಾನ ದಿವಾಳಿ ಆದ ರೀತಿ ಭಾರತವನ್ನು ದಿವಾಳಿ ಮಾಡಲು ಇವರೆಲ್ಲ ಹೊರಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಐದನೇ ಆರ್ಥಿಕ ರಾಷ್ಟ್ರವಾಗಿದೆ ಎಂದರು.
ನಮ್ಮಲ್ಲಿಯ ಕೆಲವು ಅತೃಪ್ತ ಆತ್ಮಗಳು ಅವರನ್ನ ಕೆಡವುತ್ತೇವೆ ಅಂತಾ ಓಡಾಡಿದ್ರೂ. ಕ್ಷೇತ್ರಕ್ಕೆ ಹೋಗದೇ ಗೆದ್ದಿದ್ದು ನಾನು ಮತ್ತು ಬೊಮ್ಮಾಯಿಯವರು ಮಾತ್ರ. ಸೋತಿದ್ದೇವೆ ಅಂತಾ ಮನೆಯಲ್ಲಿ ಕುಳಿತುಕೊಂಡ್ರೇ ಆಗಲ್ಲಾ. ನಾವೆಲ್ಲರೂ ಕೂಡಿ ಇವತ್ತಿನಿಂದ ಕೆಲಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ್ ಕಿವಿಮಾತು ಹೇಳಿದರು.