ಚಿಕ್ಕೋಡಿ (ಬೆಳಗಾವಿ) : ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಕೆಲವರು ಪಕ್ಷ ತೊರೆದು ಹೋಗಿದ್ದಾರೆ. ಅವರು ಯಾಕೆ ಹೋಗಿದ್ದಾರೆ, ಯಾವ ಸಿದ್ದಾಂತದ ಮೇಲೆ ಹೋಗಿದ್ದಾರೆ ಮತ್ತು ಅವರ ಉದ್ದೇಶವೇನು ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ. ಪಕ್ಷದಿಂದ ಸಾಕಷ್ಟು ಅನುಭವಿಸಿದ್ದಾರೆ. ಪಕ್ಷದಿಂದಾಗಿ ಇಷ್ಟು ದೊಡ್ಡವರಾಗಿ ಪಕ್ಷ ತೊರೆದಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ತೊರೆದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸ್ಕ್ರತಿ ಎಂದರೆ ಮೊದಲನೆಯದು ಲಿಂಗಾಯತ ವಿರೋಧಿ. ಎರಡನೇಯದ್ದು ನಮ್ಮ ಸರ್ಕಾರ ಮೀಸಲಾತಿ ಕೊಟ್ಟಿದೆ. ಇದನ್ನು ಕಾಂಗ್ರೆಸ್ನ ಅಧ್ಯಕ್ಷರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಎಲ್ಲ ಮೀಸಲಾತಿ ಮರಳಿ ಪಡೆಯುತ್ತೇವೆ ಎಂದಿದ್ದಾರೆ. ಇದಕ್ಕೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಉತ್ತರ ಕೊಡಬೇಕು ಎಂದು ಹೇಳಿದರು.
ಲಿಂಗಾಯತ, ಮರಾಠ, ಜೈನ್, ಕ್ರಿಶ್ಚಿಯನ್ ಸಮುದಾಯಗಳಿಗೆ 2ಡಿ ಅಡಿಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಎಸ್ಸಿ ಎಸ್ಟಿ ಸಮುದಾಯಗಳಿಗೆ ಶೇ. 17 ಪ್ರತಿಶತ ಮೀಸಲಾತಿ ನೀಡಲಾಗಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲಾಗಿದೆ. ಇದನ್ನು ಕಾಂಗ್ರೆಸ್‌ನವರು ಇದನ್ನು ತೆಗೆದು ಹಾಕುತ್ತೇನೆ ಎಂದು ಹೇಳುತ್ತಾರೆ. ಇದಕ್ಕೆ ಬಿಜೆಪಿಯಿಂದ ಹೋದವರ ಉತ್ತರವೇನು ಎಂದು ಕೇಳಿದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ವರ್ಗಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಮತ್ತು ಒಂದು ಶಾಸಕ ಸ್ಥಾನಕ್ಕಾಗಿ ಪಕ್ಷವನ್ನು ಬಿಟ್ಟು ಹೋಗಿದ್ದಾರಲ್ಲ, ಇದಕ್ಕೆ ಉತ್ತರ ಕೊಡಲಿ ಎಂದು ಯತ್ನಾಳ್ ಹೇಳಿದರು.
ಕಾಂಗ್ರೆಸ್ ಮಾರಾಟಕ್ಕಿರುವ ಪಕ್ಷ- ಪಂಜಾಬ್ ಸಿಎಂ: ಕಾಂಗ್ರೆಸ್ ಮಾರಾಟಕ್ಕಿರುವ ಪಕ್ಷ. ಕಾಂಗ್ರೆಸ್ನಿಂದ ಆಯ್ಕೆಯಾದ ಎಂಎಲ್‌ಎ, ಎಂಪಿಗಳು ಬಿಜೆಪಿಗೆ ಹೋಗುತ್ತಾರೆ. ಅವರಿಗೆ ಯಾರೂ ಮತ ನೀಡಬೇಡಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದ್ದಾರೆ.