ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್ ಚಿಕ್ಕೋಡಿ: ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುವುದಕ್ಕೆ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಹಾಳೂರಿಗೆ ಉಳಿದೋನೆ ಗೌಡ ಎಂಬಂತೆ ಖರ್ಗೆ ಅವರ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿದ್ದರಾಮಯ್ಯನವರು ಹೇಳ್ತಾರೆ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇನೆ ಅಂತ. ಮತ್ತೊಂದೆಡೆ, ಅವರ ಪಕ್ಷದವರೇ 2000 ಯೂನಿಟ್ ಅಂತಾರೆ. ಅಮೆರಿಕದಲ್ಲಿ ರಾಹುಲ್ ಗಾಂಧಿ ಕೇಸ್ವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ, ವಾಜಪೇಯಿಯವರ ದೊಡ್ಡ ಗುಣ ರಾಹುಲ್ ಗಾಂಧಿಯನ್ನ ಹೊರಗೆ ತಂದ್ರು, ನಮ್ಮ ದೇಶದ ಮಾನ ಮರ್ಯಾದೆ ಹಾಳಾಗಬಾರದು ಎಂದು’ ಅಂತ ವಾಗ್ದಾಳಿ ನಡೆಸಿದರು.
ಮತದಾರರಿಗೆ ಕಿವಿಮಾತು: ‘ಹಣ ಕೊಟ್ಟರೆ ತೆಗೆದುಕೊಳ್ಳಿ, ಯಾರಪ್ಪನ ಮನೆ ದುಡ್ಡಲ್ಲ, ಅದು ನಿಮ್ಮದೆ ಹಣ. ನಾನು ಮೊದಲು ಎಂಎಲ್ಎ ಆದಾಗ ಎಲ್ಹೆಚ್ನಲ್ಲಿ ಎಂಎಲ್ಎಗಳು ಇಸ್ಪೀಟ್ ಆಡುತ್ತಾ ಕುಳಿತಿದ್ರು, ಸದನದಕ್ಕೆ ಬರ್ತಿರಲಿಲ್ಲ. ಯಾರಿಗೂ ಅಂಜುವುದು ಬೇಡ, ಪರ್ವ ಕಾಲ ಬಂದಿದೆ. ಮತದಾನಕ್ಕೆ ಎರಡು ದಿನ ಇರುವಾಗ ಒಪ್ಪಂದ ಮಾಡಿಕೊಳ್ಳಬೇಡಿ. ಬೆಳಗಾವಿಯಲ್ಲಿ ಈ ಸಲ 18 ಸ್ಥಾನವನ್ನು ನಾವು ಗೆಲ್ಲುತ್ತೇವೆ’ ಎಂದು ಹೇಳಿದರು.
‘ನಾನು ಯಮಕನಮರಡಿಗೆ ಬಂದು ಹೋದ ಮೇಲೆ ಆಗಾಗ ಹೆಲಿಕಾಪ್ಟರ್ ವಿಜಯಪುರಕ್ಕೆ ಬರುತ್ತಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಬಗ್ಗೆ ಒಂದು ಬಾರಿಯಾದ್ರು ಸತೀಶ್ ಜಾರಕಿಹೊಳಿ ಮಾತಾಡಿದ್ದಾರಾ?. ಅವರು ಮೋಜು ಮಾಡಲಿಕ್ಕೆ ವಿಧಾನಸೌಧಕ್ಕೆ ಬರ್ತಾರೆ. ಮೀಸಲಾತಿ ಬಗ್ಗೆ ಮಾತನಾಡದವರು ಸುಡುಗಾಡಲ್ಲಿ ಹೋಗಿ ಕಾರು ಪೂಜೆ ಮಾಡುತ್ತಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಹಾಕಿಕೊಂಡು ಓಡಾಡ್ತಾರೆ, ಹಿಂದೂ ಅಂದ್ರೆ ಇವರಿಗೆ ನಾಚಿಕೆ ಆಗುತ್ತೆ ಅಂತಾರೆ, ಅವರು ಹಿಂದುತ್ವದ ವಿರುದ್ಧ ಮಾತನಾಡುತ್ತಾರೆ. ಈ ಸಲ 11 ರೂಪಾಯಿ ಪಟ್ಟಿ ಹಾಕಿ ನಿಮ್ಮನ್ನ ಸೋಲಿಸುತ್ತೇವೆ‘ ಎಂದು ಹೇಳಿದರು. ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ವರುಣಾದಿಂದ ಸ್ಪರ್ಧಿಸುವಂತೆ ನಮ್ಮ ಮನೆಯಲ್ಲಿ ಸಲಹೆ ನೀಡಿದ್ದಾರೆ: ಸಿದ್ದರಾಮಯ್ಯ
ಸಂಕಲ್ಪಯಾತ್ರೆ ಉದ್ದೇಶಿಸಿ ಪ್ರತಾಪ್ ಸಿಂಹ ಭಾಷಣ: ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ ಅಂತಿದ್ದ ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ಲ, ಭಾಗ್ಯಗಳ ಪಟ್ಟಿಯನ್ನೇ ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯ ಸಿಗುತ್ತಿಲ್ಲ. ಹೀಗಾಗಿ, ಕಾಂಗ್ರೆಸ್ ಟಿಕೆಟ್ ಅನೌನ್ಸ್ ಆಗ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದರು.
ಕಳೆದ ಬಾರಿ ಸಿದ್ದರಾಮಯ್ಯನನ್ನು 36 ಸಾವಿರ ಮತಗಳ ಅಂತರದಿಂದ ಸೋಲಿಸಲಾಯಿತು. ಇಂತವರನ್ನು ನಂಬಿಕೊಂಡು ಯಾರು ಮತ ಹಾಕ್ತಾರೆ. ಇಲ್ಲಿ ಸಿದ್ದರಾಮಯ್ಯರನ್ನು ಜನ ಕೈ ಹಿಡಿಯಲ್ಲ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ, ಅವರ ಹೆಂಡತಿಗೆ ವರುಣಾದ ಚಿಂತೆ, ಮಗನ ಕ್ಷೇತ್ರ ಬಿಟ್ಟುಕೊಟ್ಟರೆ ಮುಂದೆ ಏನು? ಎಂದು ವ್ಯಂಗ್ಯವಾಡಿದರು.