ಬೆಳಗಾವಿ: ಪಂಚಮಸಾಲಿ ಸಮಾಜದ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಸ್ವಾಮೀಜಿಗಳ ಮಧ್ಯೆಯೇ ಜಗಳ ಹಚ್ಚಿ ಕೆಲವರು ಕೆತ್ತ್ಯೆಬಜೆ ಮಾಡುತ್ತಿದ್ದಾರೆ ಎಂದು ಶಾಸಕ ಬಸವಗೌಡ ಪಾಟೀಲ್ ಯತ್ನಾಳ ಅವರು ಸಚಿವ ಮುರಗೇಶ ನಿರಾಣಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಪಂಚಮಸಾಲಿ ಸಮಾಜದ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆಯುತ್ತಿರುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಸಮಯದಲ್ಲೂ ಮೀಸಲಾತಿ ಚರ್ಚೆಗೆ ಬಂತು. ಸಿದ್ದರಾಮಯ್ಯ, ನಾನು ಸೇರಿ ಹಲವು ಶಾಸಕರು ಮೀಸಲಾತಿ ಸಂಬಂಧ ಧ್ವನಿ ಎತ್ತಿದ್ದೆವು ಎಂದರು.
ಇನ್ನೂ ಎರಡು ವಾರ ತಡೆಯುವಂತೆ ಸಿಎಂ ಬೊಮ್ಮಾಯಿ ನನ್ನಲ್ಲಿ ಕೋರಿದರು. ಮೀಸಲಾತಿ ಸಂಬಂಧ ಈ ಮೊದಲು ಯಾವ ಶಾಸಕರು ವಿಧಾನಸಭೆಯಲ್ಲಿ ಮಾತನಾಡುತ್ತಿರಲಿಲ್ಲ. ಅನ್ಯ ಜಾತಿಯ ಮತಗಳು ಕೈತಪ್ಪುವ ಭೀತಿ ಅವರಲ್ಲಿತ್ತು. ಆದರೆ, ನಾನು ಮೀಸಲಾತಿ ಬಗ್ಗೆ ಧ್ವನಿ ಎತ್ತಿದಾಗ ನನ್ನ ನೆರವಿಗೆ ಯಾವ ಶಾಸಕರೂ ಬರಲಿಲ್ಲ. ನಾನ್ನೊಬ್ಬನೇ ಹೋಗಿ ಬಾವಿಗಿಳಿದು ಪ್ರತಿಭಟನೆ ಮಾಡಲು ಆರಂಭಿಸಿದೆ ಎಂದರು.
ನಂತರ ಬೇರೆ ಶಾಸಕರು ನನ್ನ ಬೆಂಬಲಕ್ಕೆ ನಿಂತು ಬಾವಿಗಿಳಿದರು. ಮಹಾದೇವಣ್ಣ ಚಹ್ವಾಣ್, ಬಂಡೆಪ್ಪ ಕಾಂಶಪುರ, ಡಾ. ಯತೀಂದ್ರ, ಅಮರೇಗೌಡ ಬಯ್ಯಾಪುರ ನೆರವಿಗೆ ನಿಂತರು. ಆದರೆ, ಬಹುತೇಕ ಲಿಂಗಾಯತ ಶಾಸಕರು ನನ್ನ ನೆರವಿಗೆ ಬರಲಿಲ್ಲ. ಟಿಕೆಟ್ ಪಡೆಯಲು, ಮಂತ್ರಿ ಆಗಲಷ್ಟೇ ಲಿಂಗಾಯತ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರಗೇಶ ನಿರಾಣಿಗೆ ಟಾಂಗ್ ಕೊಟ್ಟರು.