ಕರ್ನಾಟಕ

karnataka

ETV Bharat / state

ಕಬ್ಬಿಗೆ ₹3,800 ದರ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬಾರುಕೋಲು‌ ಚಳುವಳಿ - ಜಿಲ್ಲಾಧಿಕಾರಿ ನಿತೇಶ್​ ಪಾಟೀಲ

ಸ್ವಾಭಿಮಾನಿ ಸೇತ್ಕರಿ ಸಂಘಟನೆ ಸಂಸ್ಥಾಪಕ ರಾಜು ಶೆಟ್ಟಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಬಾರುಕೋಲು ಚಳವಳಿ ನಡೆಯಿತು.

ರಾಜು ಶೆಟ್ಟಿ ನೇತೃತ್ವದಲ್ಲಿ ಬಾರುಕೋಲು‌ ಚಳುವಳಿ
ರಾಜು ಶೆಟ್ಟಿ ನೇತೃತ್ವದಲ್ಲಿ ಬಾರುಕೋಲು‌ ಚಳುವಳಿ

By ETV Bharat Karnataka Team

Published : Oct 9, 2023, 7:01 PM IST

ಕಬ್ಬಿಗೆ 3800 ರೂ. ದರ ನಿಗದಿಗೆ ಆಗ್ರಹ

ಬೆಳಗಾವಿ :ಪ್ರತಿ ಟನ್ ಕಬ್ಬಿಗೆ 3,800 ರೂಪಾಯಿ ದರ ನಿಗದಿಪಡಿಸಿ ಕಾರ್ಖಾನೆಗಳನ್ನು ಆರಂಭಿಸುವಂತೆ ಒತ್ತಾಯಿಸಿ, ಇಲ್ಲಿನ ಸ್ವಾಭಿಮಾನಿ ಸೇತ್ಕರಿ ಸಂಘಟನೆ ಸಂಸ್ಥಾಪಕ ರಾಜು ಶೆಟ್ಟಿ ನೇತೃತ್ವದಲ್ಲಿ ಬೆಳಗಾವಿಯಲ್ಲಿಂದು ಬಾರುಕೋಲು ಚಳುವಳಿ ನಡೆಸಲಾಯಿತು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ಸರ್ಕಲ್​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ರೈತ ಸಂಘಟನೆಗಳ ಮುಖಂಡರು ಮತ್ತು ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಚನ್ನಮ್ಮ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಬಾರುಕೋಲು ಬಾರಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸಾವಿರಾರು ರೈತರು ಕಬ್ಬು ಹಿಡಿದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸ್ವಾಭಿಮಾನಿ ಸೇತ್ಕರಿ ಸಂಘಟನೆ ಸಂಸ್ಥಾಪಕ ರಾಜು ಶೆಟ್ಟಿ

ರಾಜು ಶೆಟ್ಟಿ ಮಾತನಾಡಿ, "ಕಬ್ಬಿಗೆ ಎಫ್​ಆರ್​ಪಿ ಮೇಲೆ 400 ರೂ. ನೀಡಬೇಕು. ಅದೇ ರೀತಿ ಬಾಕಿ ಉಳಿದಿರುವ ಹಿಂದಿನ ವರ್ಷದ 400 ರೂ. ತಕ್ಷಣ ಬೆಳೆಗಾರರಿಗೆ ಕೊಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ. ಒಂದೇ ಒಂದು ಕಾರ್ಖಾನೆಯನ್ನೂ ಕೂಡ ಆರಂಭಿಸಲು ನಾವು ಬಿಡುವುದಿಲ್ಲ. ಸಚಿವರು ನಮ್ಮನ್ನು ಆಹ್ವಾನಿಸಿದ್ದು, ಅವರ ಜೊತೆಗೆ ಚರ್ಚೆಗೆ ನಾವು ಸಿದ್ಧ. ಆದರೆ, ನಮ್ಮ ಬೇಡಿಕೆ ಈಡೇರಿಸಬೇಕು" ಎಂದರು.

ರೈತ ಮುಖಂಡ ಗಣೇಶ ಇಳಿಗೇರ ಮಾತನಾಡಿ, "ಕೇಂದ್ರ ಸರ್ಕಾರದ ಎಫ್ಆರ್​ಪಿ ದರವನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ಯಾವ ರೈತರನ್ನು ಕೇಳಿ ಅವರು ದರ ನಿಗದಿಪಡಿಸಿದ್ದಾರೆ. 2023-24ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 3800‌ ರೂ. ದರ ನೀಡಬೇಕು. ರಾಜ್ಯದ ಸರ್ಕಾರದಿಂದಲೇ ಕಬ್ಬಿನ‌ ಕಾರ್ಖಾನೆಗಳಲ್ಲಿ ತೂಕದ ಯಂತ್ರ ನಿಯೋಜಿಸಬೇಕು. 2022-23ನೇ ಸಾಲಿನ ಕಬ್ಬಿನ ಬಾಕಿ ಬಿಲ್ ಬಿಡುಗಡೆ ಮಾಡಬೇಕು" ಎಂದರು.

ಬಳಿಕ, ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಕ್ಕುಪತ್ರ ವಿತರಣೆಗೆ ಬಗರ್‌ ಹುಕುಂ ಸಾಗುವಳಿದಾರರ ಆಗ್ರಹ:ಜಿಲ್ಲೆಯಲ್ಲಿರುವ ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ತಾಲೂಕು ಮಟ್ಟದ ಭೂ ಮಂಜೂರಾತಿ ಸಮಿತಿ (ಎಲ್‌ಜಿಸಿ) ರಚನೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ ಬಗರ್‌ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಲಾಯಿತು.

ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿ, ಬೆಳಗಾವಿ ಜಿಲ್ಲೆಯಲ್ಲಿ 70-80 ವರ್ಷಗಳಿಂದ ಭೂರಹಿತ ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲುಗಿಡ, ಕಲ್ಲು ಭೂಮಿ ಇರುವ ಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪಸ್ವಲ್ಪ ಆದಾಯವೇ ಜೀವನಾಧಾರವಾಗಿದೆ. ಇಲ್ಲಿಯವರೆಗೆ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳಿಗೂ ಈ ಬಡ ರೈತರ ಜೀವನದ ವಸ್ತುಸ್ಥಿತಿಯ ಅರಿವಿದೆ. ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದೆ. ಆದರೆ, ನಮಗೆ ಹಕ್ಕುಪತ್ರ ಮಾತ್ರ ವಿತರಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾ ಸಂಚಾಲಕ ಲಕ್ಕಪ್ಪ ಬಿಜ್ಜನ್ನವರ, "4 ತಿಂಗಳು ಕಳೆದರೂ ಇಲ್ಲಿಯವರೆಗೂ ಭೂ ಮಂಜೂರಾತಿ ಸಮಿತಿ ರಚಿಸಿಲ್ಲ. ಕೂಡಲೇ ಸರ್ಕಾರ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿ ಫಾರಂ ನಂ.57 ಸಲ್ಲಿಸಿರುವ ಅರ್ಜಿಗಳನ್ನು ಸಮಿತಿಯಲ್ಲಿ ಪರಿಶೀಲಿಸಿ ಕೂಡಲೇ ಜಿಲ್ಲೆಯ ಎಲ್ಲಾ ಸಾಗುವಳಿದಾರರಿಗೆ ಮಂಜೂರು ಮಾಡಬೇಕು. ಫಾರಂ ನಂ.57 ತುಂಬಲು ಅವಕಾಶ ಮಾಡಕೊಡಬೇಕು. ಅರಣ್ಯದಂಚಿನಲ್ಲಿ ಕೃಷಿ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಸಾಗುವಳಿದಾರರ ಮೇಲಿನ ಕೇಸ್‌ಗಳನ್ನು ಕೂಡಲೇ ಹಿಂಪಡೆಯಬೇಕು. ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆಯಾಗಿದ್ದು, ಬಗರ್‌ ಹುಕುಂ ಸಾಗುವಳಿದಾರರಿಗೂ ಬರ ಪರಿಹಾರ ಹಾಗೂ ಬೆಳೆ ಪರಿಹಾರ ನೀಡಬೇಕು. ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದರ ಜತೆಗೆ ಬರ ಪರಿಹಾರ ನೀಡಬೇಕು" ಎಂದು ಹೇಳಿದರು.

ರೈತ ಸಿದ್ದಪ್ಪ ನಾಯಿಕ ಮಾತನಾಡಿ, "ನಮ್ಮ ತಂದೆ, ಅಜ್ಜನ ಕಾಲದಿಂದಲೂ ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿದ್ದೇವೆ. ಆದರೆ, ನಮಗೆ ಹಕ್ಕುಪತ್ರ ನೀಡದೆ ಸರ್ಕಾರ ಅನ್ಯಾಯ ಮಾಡುತ್ತಿದೆ" ಎಂದು ಆರೋಪಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ, "ಶಾಸಕರ ಅಧ್ಯಕ್ಷತೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿ ರಚಿಸುವಂತೆ ಕಂದಾಯ ಸಚಿವರು ಆದೇಶ ಮಾಡಿದ್ದಾರೆ. ಹಾಗಾಗಿ, ಸಮಿತಿಗಳ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ‌. ಹೊಸ ಸಮಿತಿಯಾದ ಬಳಿಕ ಪ್ರತಿವಾರವೂ ಸಭೆ ನಡೆಸಿ, ಅರ್ಹ ರೈತರಿಗೆ ಹಕ್ಕು ಪತ್ರ ವಿತರಿಸಲಾಗುತ್ತದೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ :ಕಬ್ಬಿನ ಎಫ್​ಆರ್​ಪಿ 10 ರೂಪಾಯಿ ಹೆಚ್ಚಿಸಿದ ಕೇಂದ್ರ ಸರ್ಕಾರ: ಪ್ರತಿ ಕ್ವಿಂಟಲ್​ಗೆ ₹315 ನಿಗದಿ

ABOUT THE AUTHOR

...view details