ಬೆಳಗಾವಿ: ಬ್ಯಾಂಕ್ ಅಧಿಕಾರಿಗಳ ಯಡವಟ್ಟಿನಿಂದಾಗಿ ಪತಿಯನ್ನು ಕಳೆದುಕೊಂಡೆ. 50 ಸಾವಿರ ರೂ. ಬೆಳೆ ಸಾಲಕ್ಕೆ 1.40 ಲಕ್ಷ ರೂ. ಬಡ್ಡಿ ಹಣ ಕಟ್ಟಿದರೂ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳು ಮಾತ್ರ ಇನ್ನೂ 2.40 ಲಕ್ಷ ಬಡ್ಡಿ ಹಣ ಕಟ್ಟುವಂತೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿದರಗಡ್ಡಿ ನಿವಾಸಿ ಸುನೀತಾ ನಿಂಬಾಳ್ಕರ್ ಎಂಬುವವವರು ನಗರದ ಯೂನಿಯನ್ ಬ್ಯಾಂಕ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಮೂಲತಃ ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ನಿವಾಸಿ ಆಗಿರುವ ಸುನೀತಾ ನಿಂಬಾಳ್ಕರ್ ಎಂಬುವವರು ಈ ಆರೋಪ ಮಾಡುತ್ತಿದ್ದಾರೆ. ಸುನೀತಾ ಹಾಗೂ ರೈತ ಮುಖಂಡ ರವಿ ಪಾಟೀಲ್ ಹೇಳುವಂತೆ, ಬೈಲಹೊಂಗಲ ತಾಲೂಕಿನ ಖೂದಾನಪೂರ ಗ್ರಾಮದ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿ ನನ್ನ ಪತಿ ಬಾಲಕೃಷ್ಣ ಎಂಬುವವರು 2008ರಲ್ಲಿ 50 ಸಾವಿರ ರೂ. ಬೆಳೆ ಸಾಲ ತೆಗೆದುಕೊಂಡಿದ್ದರು. ಬೆಳೆ ಸಾಲ ತೆಗೆದುಕೊಂಡು 2013ರವರೆಗೆ ಅದರ ಬಡ್ಡಿ ಹಣ ಕಟ್ಟುತ್ತಾ ಬಂದಿದ್ದಾರೆ. ಇದಾದ ನಂತರ 2014ರಲ್ಲಿ ಮತ್ತೆ ಪೈಪ್ಲೈನ್ ಲೋನ್‍ನಲ್ಲಿ 70 ಸಾವಿರ ಹಣ ಪಡೆದುಕೊಂಡಿದ್ದರು. ಆ ಪೈಪ್ಲೈನ್ ಲೋನ್ ಹಣವನ್ನು 2015ರಲ್ಲಿ ಎಲ್ಲವನ್ನೂ ಕಟ್ಟಿ ಕ್ಲೀಯರ್ ಮಾಡಿದ್ದರು. ಆದ್ರೆ ಅನಿವಾರ್ಯ ಕಾರಣದಿಂದ ಕುಟುಂಬ ಸಮಸ್ಯೆ ಹಿನ್ನೆಲೆ 50 ಸಾವಿರ ರೂ. ಬೆಳೆ ಸಾಲಕ್ಕೆ 2014ರಿಂದ 2015ರವರೆಗೆ ಬಡ್ಡಿ ಕಟ್ಟಿರುವುದಿಲ್ಲ.
ನಂತರ ಬಾಕಿ ಉಳಿದ ಬಡ್ಡಿ ಕಟ್ಟಲು ಬ್ಯಾಂಕ್‍ನ ಅಧಿಕಾರಿಗಳ ಹತ್ರ ತೆರಳಿ ಸ್ಟೆಟ್ಮೆಂಟ್ ಕೇಳಿದ್ರೆ, ಸುಮಾರು ಎರಡು ವರ್ಷಗಳ ಕಾಲ ಎಲೆಕ್ಟ್ರಾನಿಕ್ ಮಷಿನ್ ಕೆಟ್ಟಿದೆ ಎನ್ನುವ ಮೂಲಕ ನಮ್ಮನ್ನು ಅಲೆದಾಡುವಂತೆ ಮಾಡಿದರು. ಎಷ್ಟೇ ಪ್ರಯತ್ನಿಸಿದರೂ ಬ್ಯಾಂಕ್ ಸ್ಟೆಟ್ಮೆಂಟ್ ಕೊಡಲಿಲ್ಲ. ನಂತರ ರೈತ ಮುಖಂಡರ ನೇತೃತ್ವದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಎಚ್ಚರಿಕೆ ನೀಡಿದ್ಮೇಲೆ ಇನ್ನೂ 2.40 ಲಕ್ಷ ಬಡ್ಡಿ ಹಣ ಬಾಕಿ ತುಂಬಬೇಕು ಎಂದು ಹೇಳುತ್ತಿದ್ದಾರೆ. ಆದ್ರೆ ನಮ್ಮ ಖಾತೆ ಚೆಕ್ ಮಾಡಿ ನೋಡಿದಾಗ 2017ರಲ್ಲಿ ಅಂದಿನ ಸಿಎಂ ಕುಮಾರಸ್ವಾಮಿಯವರ ಸರ್ಕಾರದಲ್ಲಿ ಸಾಲ ಮನ್ನಾ ಆಗಿದೆ.