ಚಿಕ್ಕೋಡಿ:ಹಾರೂಗೇರಿ ಪಿಕೆಪಿಎಸ್ ಬ್ಯಾಂಕ್‌ನ ಸಿಬ್ಬಂದಿ ಬೆಳೆ ಸಾಲ ಕೊಡುತ್ತಿಲ್ಲ. ಮುಚ್ಚಿ ಹೋದ ಬ್ಯಾಂಕ್ನಿಂದ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಿ ಎಂದು ಕಾಡುತ್ತಿದ್ದಾರೆ ಎಂದು ಆರೋಪಿಸಿ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರೈತ ಲಕ್ಷ್ಮಣ ತಿಪ್ಪಣ್ಣ ವಡಗೋಲೆ ತಹಶೀಲ್ದಾರ್ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಕಳೆದ 25 ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಷಡಕ್ಷರಿ ಬ್ಯಾಂಕ್ನಲ್ಲಿ ಅಲಖನೂರ ಗ್ರಾಮದ ರೈತ ಲಕ್ಷ್ಮಣ ಅವರು ಸಾಲ ಪಡೆದುಕೊಂಡಿದ್ದರು. ಆದರೆ ಆ ಬ್ಯಾಂಕ್ ಮುಚ್ಚಿ 20 ವರ್ಷಗಳೇ ಕಳೆದಿವೆ. ಮುಚ್ಚಿ ಹೋದ ಬ್ಯಾಂಕ್ನಿಂದ ಸಾಲದ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಿ ಎಂದು ಹಾರೂಗೇರಿ ಪಿಕೆಪಿಎಸ್ ಬ್ಯಾಂಕ್ ಸಿಬ್ಬಂದಿ ಕಾಡುತ್ತಿದ್ದಾರೆ. ಈ ಕ್ಲಿಯರನ್ಸ್ ಸರ್ಟಿಫಿಕೇಟ್ ಇಲ್ಲದೇ ಎರಡು ಲಕ್ಷ ಸಾಲವೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಸರ್ಕಾರ ಮಾಡಿದ ಸಾಲಮನ್ನಾದಲ್ಲಿ ನನ್ನ ಸಾಲ ಮನ್ನಾ ಆಗಿಲ್ಲ. ಹೀಗಾಗಿ ನನಗೆ ಎರಡು ಲಕ್ಷ ಸಾಲ ಬೇಕಾಗಿದ್ದು, ಅದನ್ನು ನೀಡಲು ಬ್ಯಾಂಕ್ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ಈಗ ನನಗೆ ಸಾಲದ ಅವಶ್ಯಕತೆ ಇದೆ, ನನ್ನ ಜಮೀನಿನ ಮೇಲೆ ಬೆಳೆ ಸಾಲ ಕೊಡಿ ಎಂದು ಹಾರೂಗೇರಿ ಪಿಕೆಪಿಎಸ್ ಬಳಿ ಕೇಳಿದರೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೇಳುತ್ತಿದ್ದಾರೆ ಎಂದು ರಾಯಬಾಗ ಗ್ರೇಡ್ - 2 ತಹಶೀಲ್ದಾರ ಪರಮಾನಂದ ಮಂಗಸೂಳಿ ಅವರ ಬಳಿ ರೈತ ಅಳಲು ತೋಡಿಕೊಂಡಿದ್ದಾರೆ.