ಬೆಳಗಾವಿ: ಗೋಕಾಕ್ ಹಾಗೂ ಮೂಡಲಗಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದ 2766 ಕೊರೋನಾ ವಾರಿಯರ್ಸ್‍ಗೆ ದಸರಾ ಹಬ್ಬದ ಪ್ರಯುಕ್ತ ಒಬ್ಬರಿಗೆ ತಲಾ 5 ಸಾವಿರ ರೂ. ಪ್ರೋತ್ಸಾಹಧನ ಹಾಗೂ ಉಭಯ ತಾಲೂಕಿನ 80 ಜನ ಅಧಿಕಾರಿಗಳಿಗೆ ಸ್ಮಾರ್ಟ್ ಫೋನ್ ಗಿಫ್ಟ್ ನೀಡುವ ಮೂಲಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶೇಷತೆ ಮೆರೆದಿದ್ದಾರೆ.
ತಮ್ಮ ಸ್ವಂತ ಹಣದಿಂದಲೇ ವಾರಿಯರ್ಸ್‍ಗೆ ಪ್ರೋತ್ಸಾಹಿಸಲು ಮುಂದಾಗಿದ್ದಾರೆ. ಗೋಕಾಕ್ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಪತ್ರದ ಜತೆಗೆ ದಸರಾ ಹಬ್ಬಕ್ಕೆ ಒಬ್ಬರಿಗೆ ತಲಾ ಐದು ಸಾವಿರ ನಗದು ಹಾಗೂ ಮೊಬೈಲ್ ನೀಡುವುದಾಗಿ ಘೋಷಿಸಿದರು.
ಈ ವೇಳೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸಲು ಜೀವದ ಹಂಗು ತೊರೆದು ಕೊರೊನಾ ವಾರಿಯರ್ಸ್ ಸೇವೆ ಮಾಡುತ್ತಿದ್ದಾರೆ. ಉಭಯ ತಾಲೂಕಿನ ವಾರಿಯರ್ಸ್ ರಾಜ್ಯದಲ್ಲೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಕೋಟಿ ಕೋಟಿ ವಂದನೆಗಳನ್ನು ಸಲ್ಲಿಸುತ್ತೇನೆ. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ಸಲ್ಲಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು, ನಿಮ್ಮ ಕಾರ್ಯವನ್ನು ಗುರುತಿಸಿ ಪ್ರೋತ್ಸಾಹಿಸಿ ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಉದ್ಧೇಶದಿಂದ ಈ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನಿಮ್ಮ ಈ ಪವಿತ್ರ ಕಾರ್ಯಕ್ಕೆ ಆ ದೇವರು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ. ಈ ನಿಮ್ಮ ಕಾರ್ಯ ಬೆಲೆ ಕಟ್ಟಲಾಗದು ಎಂದು ಹೇಳಿದರು.
ನನ್ನ ಕ್ಷೇತ್ರದ ಜನರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಆಗಿದೆ. ಕ್ಷೇತ್ರದ ಜನತೆಯ ಹೃದಯದಲ್ಲಿ ನಾನು ಇದ್ದೇನೆ. ನನ್ನ ಹೃದಯದಲ್ಲಿ ಕ್ಷೇತ್ರದ ಜನತೆ ಇದ್ದಾರೆ. ಪುಣ್ಯದಿಂದ ಅವರ ಸೇವೆ ಮಾಡುವ ಭಾಗ್ಯ ದೊರೆತಿದ್ದು, ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿರುವುದಾಗಿ ತಿಳಿಸಿದ ಅವರು, ಇದೇ ರೀತಿ ನಿಮ್ಮೆಲ್ಲರ ಸಹಕಾರ ಹಾಗೂ ಜನತೆಯ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದರು.