ಅಥಣಿ(ಬೆಳಗಾವಿ): ಚರ್ಮಗಂಟು ರೋಗದಿಂದ ಹಲವಾರು ಹಸು ಹಾಗೂ ಎತ್ತುಗಳು ಸಾವನ್ನಪ್ಪಿ ಅಥಣಿಯಲ್ಲಿ ರೈತರಿಗೆ ಬಾರಿ ಪ್ರಮಾಣದ ನಷ್ಟ ಸಂಭವಿಸುತ್ತಿದೆ. ಔಷಧದಿಂದ ಕೆಲವು ಜಾನುವಾರುಗಳು ರೋಗದಿಂದ ಚೇತರಿಕೆ ಕಂಡರೆ ಇನ್ನೂ ಕೆಲವು ಹಸುಗಳು ಸಾವನ್ನಪ್ಪುತ್ತಿವೆ. ಚಿಕಿತ್ಸೆಗೆ ಸ್ಪಂದಿಸದ ಮೂಕ ಪ್ರಾಣಿಗಳ ರಕ್ಷಣೆಗೆ ರೈತರು ಆಯುರ್ವೇದದ ಮೊರೆ ಹೋಗಿದ್ದು, ಉತ್ತಮ ಫಲಿತಾಂಶ ಕಂಡುಕೊಳ್ಳುತ್ತಿದ್ದಾರೆ.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಶೀತಲ್ ಪಾಟೀಲ್ ಎಂಬುವವರು ಪಕ್ಕದ ಮಹಾರಾಷ್ಟ್ರದ ಓರ್ವ ನುರಿತ ಆಯುರ್ವೇದ ವೈದ್ಯರಿಂದ ಔಷಧ ತಯಾರಿಸುವುದನ್ನು ಕಲಿತಿದ್ದಾರೆ. ಈ ದೇಶಿ ಔಷಧ ತಯಾರಿಸಿ, ರೈತರಿಂದ ಅಲ್ಪಹಣ ಸಹಾಯ ರೂಪದಲ್ಲಿ ಪಡೆದುಕೊಂಡು ಜಾನುವಾರುಗಳಿಗೆ ಆಯುರ್ವೇದ ಔಷಧ ನೀಡುತ್ತಿದ್ದಾರೆ.
ಆಯುರ್ವೇದ ಔಷಧ ವಿತರಕ ಶೀತಲ್ ಪಾಟೀಲ್ ಔಷಧದ ಬಗ್ಗೆ ಮಾಹಿತಿ ನೀಡಿದರು. 'ತುಳಸಿ ಎಲೆ, ಬಿಲ್ವಪತ್ರಿ, ವೀಳ್ಯದೆಲೆ, ಕಾಮ ಕಸ್ತೂರಿ, ಜೀರಿಗೆ, ಮೆಣಸಿನಕಾಳು, ಕೊತ್ತಂಬರಿ ಕಾಳು, ದಾಲ್ಚಿನ್ನಿ, ಬೆಲ್ಲ, ಬಿಳಿ ಈರುಳ್ಳಿ, ಬೆಳ್ಳುಳ್ಳಿ, ಅರಿಶಿಣ ಪುಡಿ ಬಳಸಿ ಆಯುರ್ವೇದ ಔಷಧ ತಯಾರಿಸಿ ರೈತರಿಗೆ ನೀಡುತ್ತಿದ್ದಾರೆ. ನಿತೇಶ್ ಓಜಾ ಎಂಬುವವರ ಪಂಚಗವ್ಯದಲ್ಲಿ ನಾವು ಇದನ್ನು ಕಲಿತಿದ್ದೇವೆ. ಇದಕ್ಕೆ 150 ರೂ. ಖರ್ಚು ಬರಲಿದೆ. ಈ ಔಷಧಿಯಿಂದ ಉತ್ತಮ ಫಲಿತಾಂಶ ಕಂಡುಕೊಂಡಿದ್ದೇವೆ' ಅಂತಾರೆ ಆಯುರ್ವೇದ ಔಷಧ ವಿತರಕ ಶೀತಲ್ ಪಾಟೀಲ್.
'ಈಗಾಗಲೇ ಸರ್ಕಾರ ಕೂಡಾ ಚರ್ಮಗಂಟು ರೋಗಕ್ಕೆ ಔಷಧಿ ನೀಡಿ ಹಗಲು ರಾತ್ರಿ ಎನ್ನದೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಆದರೆ, ಕೆಲವು ಭಾಗದಲ್ಲಿ ಸೋಂಕು ಹತೋಟಿಗೆ ಬಾರದೆ ಇದರಿಂದಾಗಿ ಕೆಲವು ವೈದ್ಯರು ಆಯುರ್ವೇದದ ಮೊರೆ ಹೋಗಿ ಎಂದು ಸಲಹೆ ನೀಡಿದ್ದಾರೆ. 250 ಗ್ರಾಂ ಆಯುರ್ವೇದ ಔಷಧ ಮೂರು ಗಂಟೆಗೆ ಒಮ್ಮೆ ಮೂರು ಸಲ ನೀಡುತ್ತೇವೆ. ಹೀಗಾಗಿ ನಾವು ಉತ್ತಮ ಫಲಿತಾಂಶ ಕಂಡುಕೊಂಡಿದ್ದೇವೆ' ಎಂದು ಐನಾಪುರ ಗ್ರಾಮದ ಹನುಮಂತ ರೆಡ್ಡಿ ಹೇಳಿದರು.
ಓದಿ:ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟ ಚರ್ಮ ಗಂಟು ರೋಗ: ಶಿರಸಿಯೊಂದರಲ್ಲೇ 40ಕ್ಕೂ ಅಧಿಕ ಪ್ರಕರಣ ದಾಖಲು