ಬೆಳಗಾವಿ:ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹೇಗೆ ಬಳಸಬೇಕು, ಅಲ್ಲದೆ ಹೇಗೆ ಕೊರೊನಾ ಹರಡದಂತೆ ಎಚ್ಚರ ವಹಿಸಬೇಕು ಎಂದು ಕೂಲಂಕುಷವಾಗಿ ತಿಳಿಸುವ ಕೆಲಸ ಮಾಡುತ್ತಿದ್ದಾರೆ.
ಮನೆ ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ
ಬೆಳಗಾವಿಯ ಮಂಡೊಳಿ, ಹಂಗರಗಾ, ಸಾವಗಾಂವ ಹಾಗೂ ಬೆನಕನ ಹಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ಧಾರೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಾರ್ಮಿಕ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಬಗ್ಗೆ ಮಂಡೊಳಿ, ಹಂಗರಗಾ, ಸಾವಗಾಂವ ಹಾಗೂ ಬೆನಕನ ಹಳ್ಳಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ.ಡಿ. ಎನ್.ಮಿಸಾಳೆ ಮುಂದಾಳತ್ವದಲ್ಲಿ ನೀರಿನಿಂದ ಹಾಗೂ ಸೋಪಿನಿಂದ ವೈಜ್ಞಾನಿಕವಾಗಿ ಕೈಗಳನ್ನು ತೊಳೆಯುವ ಬಗ್ಗೆ ಹಾಗೂ ಸ್ಯಾನಿಟೈಸರ್ ಉಪಯೊಗಿಸುವ ಕುರಿತು ಪ್ರಾಯೋಗಿಕವಾಗಿ ಕೊರೊನಾ ಸೈನಿಕರು ಹಾಗೂ ಆಶಾ ಕಾರ್ಯಕರ್ತೆಯರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಅಲ್ಲದೆ ಕೊರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರದ ಮಹತ್ವವನ್ನು ಜನರಿಗೆ ವಿವರಿಸಿದರು. ಕಾರ್ಮಿಕ ಇಲಾಖೆಯ ಉಪಾಯುಕ್ತ ವೆಂಕಟೇಶ ಸಿಂದಿಕಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಅಶೋಕ ಬದಾಮಿ, ಕಾರ್ಮಿಕ ಇಲಾಖೆ ಅಧಿಕಾರಿ ಮಹಾಂತೇಶ ಜೋಗುರ, ಲೇಬರ್ ಇನ್ಸ್ಪೆಕ್ಟರ್ ರಮೇಶ್ ಕೆಸರೂರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಎಲಿಗಾರ ಈ ವೇಳೆ ಉಪಸ್ಥಿತರಿದ್ದರು.