ಕರ್ನಾಟಕ

karnataka

ETV Bharat / state

ಸಕ್ಕರೆ ಕಾರ್ಖಾನೆಗಳು ರೈತರ ಹಿತಾಸಕ್ತಿ ಕಾಪಾಡಬೇಕು: ಸಚಿವ ಶಿವಾನಂದ ಪಾಟೀಲ

ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಭಾಂಗಣದಲ್ಲಿ 'ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ 2022-23ನೇ ಸಾಲಿನ ಹಂಗಾಮು' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

Minister Shivananda Patil distributed the award to the sugar mills.
ಸಕ್ಕರೆ ಕಾರ್ಖಾನೆಗಳಿಗೆ ಪ್ರಶಸ್ತಿಯನ್ನು ಸಚಿವ ಶಿವಾನಂದ ಪಾಟೀಲ ವಿತರಿಸಿದರು.

By ETV Bharat Karnataka Team

Published : Dec 22, 2023, 7:14 PM IST

ಬೆಳಗಾವಿ: ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ಕೆಲಸ ಮಾಡಬೇಕು. ಒಂದು ಕಾಲದಲ್ಲಿ ದೇಶದಲ್ಲಿ ಸಕ್ಕರೆ ಆಮದು ಮಾಡಿಕೊಳ್ಳುವ ಸಂದರ್ಭವಿತ್ತು. ಆದರೆ ಈಗ ಕಬ್ಬು ದೇಶದ ಆರ್ಥಿಕತೆಗೆ ನೆರವಾಗುವ ಪ್ರಮುಖ ಬೆಳೆಯಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ 'ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ 2022-23 ನೇ ಸಾಲಿನ ಹಂಗಾಮು' ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ಭವಿಷ್ಯ: ಜಗತ್ತಿನ ವೈಜ್ಞಾನಿಕ ಕ್ರಾಂತಿಯಲ್ಲಿ ಕಬ್ಬು ಬೆಳೆಯ ಪಾತ್ರ ಸಾಕಷ್ಟಿದೆ. ಬರುವ ವರ್ಷಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ಭವಿಷ್ಯವಿದೆ. ಕಾರ್ಖಾನೆಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಕ್ಕಿವೆ. ಉದ್ದಿಮೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 25 ಸಾವಿರ ಕೋಟಿಯಿಂದ 35 ಸಾವಿರ ರೂ ಕೋಟಿಯವರೆಗೆ ಆದಾಯ ಬರುತ್ತಿದೆ ಎಂದು ತಿಳಿಸಿದರು.

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆ ಅಗತ್ಯ: ದೇಶದಲ್ಲಿ ಕಬ್ಬು ಬೆಳೆ ಬೆಳೆಯುವುದರಲ್ಲಿ ರಾಜ್ಯ ಈಗ 2 ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನದಲ್ಲಿ ಮೊದಲ ಸ್ಥಾನ ಅಲಂಕರಿಸಲಿದ್ದೇವೆ. ರೈತನಿಗೆ ಹೆಚ್ಚಿನ ಆದಾಯ ನೀಡುವುದು ಕಬ್ಬು ಬೆಳೆ ಮಾತ್ರ. ರೈತರು ಪಾರಂಪರಿಕ ಕೃಷಿ ಹೊರತುಪಡಿಸಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಗಳು ಹಾಗೂ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಸಮನ್ವಯ, ಸಾಮರಸ್ಯದಿಂದ ರೈತರಿಗೆ ಕಬ್ಬಿನ ಬೆಳೆಗೆ ರೈತರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸಚಿವರು ಸಲಹೆ ನೀಡಿದರು.

ಮೊದಲಿನಿಂದಲೂ ದೇಶಕ್ಕೆ ರೈತನ ಕೊಡುಗೆ ಅಪಾರವಾಗಿದೆ. ಔದ್ಯೋಗಿಕವಾಗಿ ಮತ್ತು ವೈಜ್ಞಾನಿಕವಾಗಿ ದೇಶಕ್ಕೆ ಕೊಡುಗೆ ನೀಡುವ ಕಾರ್ಯಕ್ಕೆ ಕಾರ್ಖಾನೆಗಳು ಮುಂದಾಗಬೇಕು. ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೇವಲ ಪಠ್ಯ ಕ್ರಮ ಅನುಸರಿಸದೆ ರೈತರು ಬೆಳೆದ ವಿವಿಧ ಕಬ್ಬು ಬೆಳೆಗಳ ಕುರಿತು ಪ್ರಾಯೋಗಿಕವಾಗಿ ಅಧ್ಯಯನ ಮಾಡುವಂತೆ ಸಲಹೆ ನೀಡಿದರು.

ಇದಕ್ಕೂ ಮೊದಲು ಬಾಗಲಕೋಟೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ, ನಿಪ್ಪಾಣಿಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಗಳಿಗೆ ಅತ್ಯುತ್ತಮ ತಾಂತ್ರಿಕ ದಕ್ಷತೆ ಪ್ರಶಸ್ತಿ, ವಾಯುವ್ಯ ವಲಯದಲ್ಲಿ ರಾಯಬಾಗ ತಾಲೂಕಿನ ಬಾವನಸೌಂದತ್ತಿಯ ಶಿವಶಕ್ತಿ ಶುಗರ್ಸ್, ಸಂಕೋನಟ್ಟಿಯ ಕೃಷ್ಣ, ಮುನವಳ್ಳಿ ರೇಣುಕಾ ಶುಗರ್ಸ್ ಕಾರ್ಖಾನೆಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈಶಾನ್ಯ ವಲಯದಲ್ಲಿ ಕಲಬುರ್ಗಿ ಜಿಲ್ಲೆಯ ಕೆ.ಪಿ.ಆರ್.ಶುಗರ್ಸ್ ಮತ್ತು ದಿ.ಮಹಾತ್ಮ ಗಾಂಧಿ ಎಸ್.ಎಸ್.ಕೆ.ಎನ್ ಶುಗರ್ಸ್ ಸಕ್ಕರೆ ಕಾರ್ಖಾನೆಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಲಾಯಿತು. ದಕ್ಷಿಣ ಮತ್ತು ಮಧ್ಯ ವಲಯದಲ್ಲಿ ಗದಗ ಜಿಲ್ಲೆಯ ವಿಜಯನಗರ ಶುಗರ್ಸ್, ಮಂಡ್ಯ ಜಿಲ್ಲೆಯ ಕೊರಮಂಡಲ ಶುಗರ್ಸ್ ಸಕ್ಕರೆ ಕಾರ್ಖಾನೆಗಳಿಗೆ ಪ್ರಥಮ, ದ್ವಿತೀಯ ಪ್ರಶಸ್ತಿ ವಿತರಿಸಲಾಯಿತು.

ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ: ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಬಿಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಗಳಾದ ಸುಪ್ರೀತ್ ಪಿರಗನ್ನವರ ಪ್ರಥಮ, ಸುರಜಸಿಂಗ್ ಚೊಪದಾರ ದ್ವಿತೀಯ ಹಾಗೂ ಅಭಿನಂದನ್ ಪಾಟೀಲ ತೃತೀಯ ರ್ಯಾಂಕ್ ಗಳಿಸಿದ್ದಾರೆ.

ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಶಿವಲಿಂಗ ಮೇತ್ರಿ, ಮಂಜುನಾಥ ಬುದ್ನಿ, ಸೌರಭ ಶೆಟ್ಟಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಗುರುನಾಥ ಕುಂಡೇಕರ, ರಾಹುಲ್ ಸೊರಗಾವಿ, ಸೌರಭ ಪಾಟೀಲ ಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು. ಎಂಎಸ್ಸಿ ವಿದ್ಯಾರ್ಥಿಗಳಾದ ಬಾಳಯ್ಯ ಪೂಜಾರ ಪ್ರಥಮ, ಹರೀಶ ಕಣಕರೆಡ್ಡಿ ದ್ವಿತೀಯ, ಕೃಷ್ಣಾ ರಾಠೋಡ ಅವರಿಗೆ ತೃತೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ, ಸಂಸ್ಥೆಯ ಉಪಾಧ್ಯಕ್ಷ ರಮೇಶ ಪಟ್ಟಣ, ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕ ಎಂ.ರವಿಕುಮಾರ, ಆಡಳಿತ ಮಂಡಳಿಯ ಸದಸ್ಯ ಅಜೀತ ದೇಸಾಯಿ, ಅಶೋಕ ಪಾಟೀಲ, ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಹಾಜರಿದ್ದರು.

ಇದನ್ನೂಓದಿ:ನಿರ್ಯಾತ - ಆಯಾತದಿಂದ ದೇಶಕ್ಕೆ ದೊಡ್ಡ ಹಾನಿ: ಕೇಂದ್ರದ ನೀತಿಗೆ ಸಚಿವ ಶಿವಾನಂದ ಪಾಟೀಲ ಅಸಮಾಧಾನ

ABOUT THE AUTHOR

...view details