ಚಿಕ್ಕೋಡಿ(ಬೆಳಗಾವಿ): ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಇಬ್ಬರು ಯುವಕರಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಕಲಿ ಗ್ರಾಮದ ಬಸವರಾಜ ಪಾಟೀಲ, ಹಾಗೂ ಶುಭಂ ಕಿವುಂಡಾ ಎಂಬವರ ಮೇಲೆ ಹಲ್ಲೆಯಾಗಿದೆ. ಅಂಗತ ಕರಮೆ, ಅನಿಕೇತ್ ಕರಮೆ, ಶಾಹು ಮಗದುಮ್ ಸೇರಿದಂತೆ ಹಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಕಲಿ ಗ್ರಾಮದಲ್ಲಿ ಕೆಲವು ಯುವಕರು ಶಿವಾಜಿ ಪುತ್ಥಳಿ ಬಳಿ ಕನ್ನಡ ಧ್ವಜ ಅಳವಡಿಸಿದ್ದರು ಎಂದು ಹೇಳಲಾಗಿದೆ. ತೆರವು ಮಾಡುವ ವಿಚಾರಕ್ಕೆ ಜಗಳ ನಡೆದಿದ್ದು, ಯುವಕರನ್ನು ಥಳಿಸಲಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇತರೆ ನಾಲ್ವರಿಗೆ ಶೋಧ ನಡೆಯುತ್ತಿದೆ.
ಬೆಳಗಾವಿಯಲ್ಲಿ ಕನ್ನಡ ಧ್ವಜ ತೆರವು, ಪ್ರತಿಭಟನೆ: ಕಳೆದೆರಡು ದಿನಗಳ ಹಿಂದೆ ಕಿಡಿಗೇಡಿಗಳು ಕನ್ನಡ ಧ್ವಜ ತೆರವುಗೊಳಿಸಿದ್ದ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿತ್ತು. ಬ್ರಹ್ಮಲಿಂಗೇಶ್ವರ ಜಾತ್ರೆ ನಿಮಿತ್ತ ಎಂಇಎಸ್ ಭಗವಾಧ್ವಜ ಅಳವಡಿಸಲಾಗಿತ್ತು. ಇಲ್ಲಿ ಭಗವಾಧ್ವಜ ಅಳವಡಿಸುತ್ತಿದ್ದಂತೆ, ಕನ್ನಡಪರ ಹೋರಾಟಗಾರರು ಕನ್ನಡ ಬಾವುಟ ಹಾರಿಸಿದ್ದರು. ಅಲ್ಲದೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣದ ಮರದ ಮೇಲೆ ಕನ್ನಡ ಧ್ವಜ ಹಾಕಲಾಗಿತ್ತು. ಈ ಧ್ವಜವನ್ನು ರಾತ್ರೋರಾತ್ರಿ ಕಿಡಿಗೇಡಿಗಳು ತೆರವು ಮಾಡಿದ್ದರು.