ಬೆಳಗಾವಿ:ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆ ಖಂಡನೀಯ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರೂ ಜನರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆಯನ್ನು ನಾನು ಖಂಡಿಸುತ್ತೇನೆ ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕಿ ನಿಜಾಮುದ್ದೀನ್ ಕಾರ್ಯಕ್ರಮದಿಂದ ಬಂದವರು ಸ್ವಯಂಪ್ರೇರಿತವಾಗಿ ಮಾಹಿತಿ ನೀಡಬೇಕು. ದೇಶ, ರಾಜ್ಯ, ಸಮಾಜಕ್ಕೆ ಅಲ್ಲದಿದ್ದರೂ ನಿಮ್ಮ ಕುಟುಂಬ ಹಾಗೂ ನಿಮ್ಮ ಜೀವ ಉಳಿಸಿಕೊಳ್ಳಲು ಹೊರಗೆ ಬರಬೇಕು ಎಂದು ಮನವಿ ಮಾಡಿದರು.
ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಐದರಿಂದ ಹತ್ತು ಜನ ಭಾಗಿಯಾಗಿದ್ದರು. ಈ ಎಲ್ಲರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದೇನೆ. ಎಲ್ಲರೂ ಹೋಮ್ ಕ್ವಾರಂಟೈನ್ನಲ್ಲಿದ್ದು, ನಿಗಾ ಇಡಲಾಗಿದೆ. ಯಾರಲ್ಲೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಕಳ್ಳಭಟ್ಟಿ ಸಾರಾಯಿ ದಂಧೆ ಜಾಸ್ತಿ ನಡೆಯುತ್ತಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು 3800 ಕಾರ್ಮಿಕರು ಹೋಮ್ ಕ್ವಾರಂಟೈನಲ್ಲಿದ್ದಾರೆ. ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಬಂದವರಿಗೆ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಜನರಿಗೆ ಕುಡಿಯುವ ನೀರು, ರೇಷನ್, ಹಾಲು ವಿತರಿಸಲು ಸೂಚಿಸಲಾಗಿದೆ. ಸವಿತಾ ಸಮಾಜದವರಿಗೆ ಸರ್ಕಾರದ ವತಿಯಿಂದ ಹಣ ನೀಡೋದಾಗಿ ಸಿಎಂ ಹೇಳಿದ್ದಾರೆ. ಹಡಪದ ಸಮಾಜದವರು ಸಹ ಸವಿತಾ ಸಮಾಜಕ್ಕೆ ಸೇರಿದವರು. ಹಡಪದ ಸಮಾಜಕ್ಕೂ ಅನುದಾನ ನೀಡಬೇಕೆಂದು ಸಿಎಂಗೆ ಮನವಿ ಮಾಡಿದರು.