ಅಥಣಿ:ದೇಶದಲ್ಲಿ ಅನೇಕ ನಂಬಿಕೆಗಳನ್ನು ಅಳವಡಿಸಿಕೊಂಡು ಬದುಕುತ್ತಿರುವ ಜನರು, ಅದರಲ್ಲೂ ಶವ ಸಂಸ್ಕಾರದಲ್ಲಿ ಆಯಾ ಧರ್ಮದ ಅನುಸಾರವಾಗಿ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ನೆರವೇರಿಸುತ್ತಾರೆ. ಇದಕ್ಕೆಲ್ಲ ಪೂರ್ಣ ವಿರಾಮ ನೀಡಿ ಅಥಣಿ ತಾಲೂಕಿನ ಓರ್ವ ಅಜ್ಜಿ ದೇಹ ದಾನ ಮಾಡಿ ಮಾದರಿಯಾಗಿದ್ದಾರೆ.
ತಾಲೂಕಿನ ಕೊಟ್ಟಲಗಿ ಗ್ರಾಮದ ರತ್ನವ್ವ ಗುರಬಸು ಮಾಳಿ ಎಂಬ 77 ವರ್ಷದ ಅಜ್ಜಿ, ವಿಜಯಪುರ ವೈದ್ಯಕೀಯ ಮಹಾವಿದ್ಯಾಲಯ ಬಿ.ಎಂ.ಪಾಟೀಲ ಮೆಡಿಕಲ್ ಕಾಲೇಜ್ಗೆ ಏಳು ವರ್ಷದ ಹಿಂದೆ ದೇಹದಾನ ಮಾಡಿದ್ದಾರೆ. ಇದಕ್ಕೆ ಕುಟುಂಬಸ್ಥರು ಕೂಡ ಒಪ್ಪಿಗೆ ನೀಡಿದ್ದು, ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ರತ್ನವ್ವ ಅಜ್ಜಿ ಮೂಢನಂಬಿಕೆಯ ಕಾರಣ ಬಹುತೇಕರು ದೇಹದಾನ ಮತ್ತು ಅಂಗಾಂಗ ದಾನ ಮಾಡಲು ಮುಂದೆ ಬರುವುದಿಲ್ಲ. ಆದರೆ ಮನುಷ್ಯರಾದವರು ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ. ಕಣ್ಣು, ಕಿಡ್ನಿ, ಲಿವರ್, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕು ಎನ್ನುತ್ತಾರೆ ರತ್ನವ್ವ ಅಜ್ಜಿ.
ಬಡವಿಯಾದ ನನಗೆ ಯಾವ ದಾನ ಧರ್ಮ ಮಾಡಲು ಸಾಧ್ಯವಾಗಿಲ್ಲ. ಇನ್ನು ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಈ ದೇಹವಾದರೂ ವಿದ್ಯಾಭ್ಯಾಸ ಮಾಡುವ ನಾಲ್ಕು ಜನರಿಗೆ ಪ್ರಯೋಜನಕ್ಕೆ ಬರಲಿ ಎಂಬುದು ನನ್ನ ಉದ್ದೇಶವಾಗಿದೆ. ಹಾಗಾಗಿ ನಾನು ಸ್ವಇಚ್ಛೆಯಂತೆ ಶರೀರ ದಾನ ಮಾಡಿದ್ದೇನೆ ಎಂದು ರತ್ನವ್ವ ಮಾಳಿ ಭಾವುಕರಾದರು.