ಅಥಣಿ(ಬೆಳಗಾವಿ): ತಾಲೂಕಿನ 44 ಜನರು ಜಾರ್ಖಂಡ್ ಪ್ರವಾಸ ಮಾಡಿ ಬಂದಿರುವ ಬೆನ್ನಲ್ಲೇ, ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಭಾರೀ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಝುಂಜರವಾಡ್, ನಂದಗಾಂವ್, ಸವದಿ, ಖವಟಗೊಪ್ಪ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ. ಗ್ರಾಮದಲ್ಲಿ ಸ್ವಯಂಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಅಂಗಡಿ-ಮುಂಗಟ್ಟು, ಮನೆ, ದೇವಸ್ಥಾನಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಒಂದು ರೀತಿಯ ಸ್ಮಶಾನ ಮೌನ ಆವರಿಸಿದೆ.
ಜನರಲ್ಲಿ ಯಾಕೆ ಆತಂಕ:
ಇನ್ನು ತಾಲೂಕಿನ ಖವಟಗೊಪ್ಪ ಗ್ರಾಮದಲ್ಲಿ ಸೋಂಕಿತ ಮಹಿಳೆ ತನ್ನ ಬಂಧು ಬಳಗಕ್ಕೆ ಊಟದ ವ್ಯವಸ್ಥೆ ಮಾಡಿದ್ದಳು ಎನ್ನಲಾಗ್ತಿದೆ. ಈ ಹಿನ್ನೆಲೆ ಅಲ್ಲಿ ಊಟ ಮಾಡಿ ಬಂದವರೆಲ್ಲಾ ಹೆದರಿ ಮನೆಯಲ್ಲೇ ಇದ್ದಾರೆ. ಇತ್ತ ತಮ್ಮನ್ನು ಕೂಡ ಕ್ವಾರಂಟೈನ್ ಮಾಡುತ್ತಾರೆಂಬ ಭಯದಿಂದ ತಾಲೂಕು ಆಡಳಿತಕ್ಕೆ ಇವರು ಸರಿಯಾದ ಮಾಹಿತಿ ಕೂಡ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.
ಇಷ್ಟೆಲ್ಲ ಶಂಕಿತರು ಊರೆಲ್ಲ ತಿರುಗಾಡಿದರೂ ಇವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿಲ್ಲ ಎಂದು ಕೆಲವರು ಆರೋಪ ಮಾಡಿದ್ದಾರೆ.