ಅಥಣಿ:ಕಳೆದ ಹತ್ತು ವರ್ಷಗಳಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ನಿರಂತರ ಮನವಿ ಮೇಲೆ ಕಳೆದು ತಿಂಗಳು ನಿರ್ಮಾಣಗೊಂಡಿದ್ದ ರಸ್ತೆ ಇದೀಗ ಹಾಳಾಗಿದೆ. ಡಾಂಬರೀಕರಣ ಮಾಡಿದ ಒಂದೇ ತಿಂಗಳಲ್ಲಿ ಹಾಳಾಗಿರುವ ಕಾರಣ, ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಿಂದ ವಿಜಯಪುರ ಜಿಲ್ಲೆಯ ಕಲಮಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮುಗಿದು ಒಂದೇ ತಿಂಗಳಲ್ಲಿ ಹದಗೆಟ್ಟಿದೆ. ಗ್ರಾಮಸ್ಥರು ಇದೀಗ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಥಣಿ ಜಿಲ್ಲಾ ಪಂಚಾಯತ್ ಅಭಿಯಂತರರಾದ ವೀರಣ್ಣ ವಾಲಿ ಅವರಿಗೆ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಹಾಗು ಇದುವರೆಗೂ ಅವರು ಈ ರಸ್ತೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿಲ್ಲವೆಂದು ಕೊಟ್ಟಲಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ, ಐದು ಕಿಲೋಮೀಟರ್ ರಸ್ತೆಯ ಕಾಮಗಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಾಲ್ಕು ಕಿಲೋಮೀಟರ್ ರಸ್ತೆ ಮಾತ್ರ ಅಭಿವೃದ್ಧಿ ಪಡಿಸಲಾಗಿತ್ತು. ಇನ್ನುಳಿದ ಒಂದು ಕಿಲೋಮೀಟರ್ ರಸ್ತೆ ಕಾಮಗಾರಿಯನ್ನು ಕಳೆದು ತಿಂಗಳು ಮುಗಿಸಲಾಗಿತ್ತು. ಆದರೆ, ಕಾಮಗಾರಿ ಪುರ್ಣವಾಗುವ ಮೊದಲೇ ರಸ್ತೆ ಮತ್ತೆ ಹದಗೆಟ್ಟಿದೆ.
ಕಳೆದ ಎರಡು ವರ್ಷ ಹಿಂದೆ ನಿರ್ಮಾಣವಾದ ರಸ್ತೆ ಅದು ಕೂಡ ಸಂಪೂರ್ಣ ಹಾಳಾಗಿದೆ. ಇದು 40% ಸರ್ಕಾರದ ಕಾರ್ಯ ವೈಖರಿ ಎಂದು ಕೊಟ್ಟಲಗಿ ಗ್ರಾಮಸ್ಥರಾದ ಶ್ರೀಶೈಲ ಸತ್ತಿಗೇರಿ ಸರ್ಕಾರ ಮೇಲೆ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಂದು ವೇಳೆ ವಿಳಂಬ ಮಾಡಿದರೆ ನ್ಯಾಯಾಲಯ ಮೊರೆ ಹೋಗುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಶಾಲೆಗೆ ಹೋಗುವ ಅವಸರದ ನಡುವೆ ರಸ್ತೆ ಹೊಂಡ ಮುಚ್ಚಿದ ವಿದ್ಯಾರ್ಥಿ.. ಶ್ಲಾಘನೆ