ಅಥಣಿ: ರಾಜ್ಯ ಸಚಿವ ಸಂಪುಟ ಇಂದು ರಚನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಯಾರೆಲ್ಲ ಸಚಿವರಾಗಲಿದ್ದಾರೆ ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಈ ನಡುವೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕುಮಟಳ್ಳಿ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದಾರೆ.
(ಮಂಗಳವಾರ) ತಡರಾತ್ರಿ 2 :30ಕ್ಕೆ ಬೆಂಗಳೂರಿಗೆ ಬರುವಂತೆ ಸಿಎಂ ಕಚೇರಿಯಿಂದ ಶಾಸಕ ಕುಮಳ್ಳಿಗೆ ಕರೆ ಬಂದಿದೆ. ಬೆಳಗ್ಗೆ 6 ಗಂಟೆಗೆ ಶಾಸಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂಓದಿ: ಇಂದು ಬೆಳಗ್ಗೆ ಶುಭ ಸುದ್ದಿ, ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣವಚನ: ಸಿಎಂ
ಈ ಬಗ್ಗೆ ವಿಚಾರಿಸಲು ಈಟಿವಿ ಭಾರತ ದೂರವಾಣಿ ಮೂಲಕ ಶಾಸಕರನ್ನು ಸಂಪರ್ಕಿಸಿದಾಗ, ನನಗೆ ಸಿಎಂ ಕಚೇರಿಯಿಂದ ಯಾವುದೇ ಕರೆ ಬಂದಿಲ್ಲ. ನಾನು ಕಳೆದ ಮೂರು ದಿನಗಳಿಂದ ಕ್ಷೇತ್ರದ ಕೃಷ್ಣಾ ನದಿ ಪ್ರವಾಹ ಭಾದಿತ ಗ್ರಾಮಗಳಿಗೆ ತೆರಳಿ ಸಂತ್ರಸ್ತರ ಭೇಟಿ ಕಾರ್ಯದಲ್ಲಿ ನಿರತನಾಗಿದ್ದೇನೆ. ಸದ್ಯ, ಬೆಂಗಳೂರಿಗೆ ತೆರಳುತ್ತಿದ್ದೇನೆ. ಸಿಎಂ ಕಚೇರಿಯಿಂದ ಕರೆ ಬಂದಿಲ್ಲ, ಕರೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶಾಸಕ ಮಹೇಶ್ ಕುಮಟಳ್ಳಿ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಂತೆ, ಅವರ ಅಭಿಮಾನಿಗಳು ಕೂಡ ಬೆಂಗಳೂರಿನತ್ತ ತೆರಳಿದ್ದಾರೆ. ಹಾಗಾಗಿ, ಮಹೇಶ್ ಕುಮಟಳ್ಳಿಗೆ ಸಚಿವ ಸಿಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ.