ಅಥಣಿ:ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಪೋಸ್ಟ್ ಹಾಗೂ ಕೋವಿಡ್ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ಆರೋಪಗಳಿಗೆ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯಿಸಿದ್ದಾರೆ.
ಜನರಿಗೆ ದಾನ ಮಾಡಿ ಫೋಟೋ ತೆಗೆಸಿಕೊಳ್ಳೋದು ಶೋಕಿ ಆಗಿದೆ: ಮಹೇಶ್ ಕುಮಟಳ್ಳಿ
ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಮುಂದಿನ ಆದೇಶ ಬರುವವರೆಗೆ ಕಾನೂನು ಉಲ್ಲಂಘನೆ ಮಾಡಬಾರದು. ಕೊರೊನಾ ವೈರಸ್ ನಿರ್ಮೂಲನೆ ಆಗುವವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮನೆಯಲ್ಲಿಯೇ ಇರೋಣ ಎಂದು ಸಾರ್ವಜನಿಕರಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಮನವಿ ಮಾಡಿದರು.
ನಗರದಲ್ಲಿರುವ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಕೆಲವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಗ್ರಾಮಗಳಿಗೆ ಭೇಟಿ ನೀಡಿದರೆ ನನ್ನ ಜೊತೆ ಹಲವು ಜನರು ಸೇರುವುದರಿಂದ ಕಾನೂನು ಉಲ್ಲಂಘಿಸಿದಂತೆ ಆಗುತ್ತದೆ. ಜನರಿಗೆ ನಮ್ಮಿಂದ ಉಪಯೋಗ ಆಗಬೇಕೇ ಹೊರತು ತೊಂದರೆ ಆಗಬಾರದು ಎಂದರು.
ಕೆಲವು ಜನರು ಜೀವನಾವಶ್ಯಕ ವಸ್ತುಗಳನ್ನು ದಾನ ಮಾಡಿ ಫೋಟೋ ತೆಗೆದುಕೊಳ್ಳುವುದು ಶೋಕಿ ಆಗಿದೆ ಎಂದರು. ಈ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ ಎನ್ನಲಾಗುತ್ತಿದೆ. ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಇಟ್ಟುಕೊಂಡು ಕೆಲವರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.