ಕರ್ನಾಟಕ

karnataka

ETV Bharat / state

ಅಥಣಿ: ಹುದ್ದೆ ಖಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಅತಿಥಿ ಉಪನ್ಯಾಸಕರ ಮನವಿ - Athani Tahsildar

ರಾಜ್ಯದ ಹಲವು ಭಾಗಗಳಲ್ಲಿ ಅತಿಥಿ ಉಪನ್ಯಾಸಕರು ಸರ್ಕಾರದ ನೀತಿಯ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಅದರಂತೆ ಅಥಣಿಯಲ್ಲಿ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಇಲ್ಲಿನ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Athani: Guest lecturers request govt for fulfill their demands in Athani
ಅಥಣಿ: ಹುದ್ದೆ ಖಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಅತಿಥಿ ಉಪನ್ಯಾಸಕರ ಮನವಿ

By

Published : Jun 25, 2020, 11:06 PM IST

ಅಥಣಿ (ಬೆಳಗಾವಿ): ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು. ಅತಿಥಿ ಶಿಕ್ಷಕರ ಹೋರಾಟ ಸಮಿತಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್​ ( AIDY0 ) ಅಥಣಿ ತಾಲೂಕು ಸಂಘಟನೆಯ ವತಿಯಿಂದ ಅತಿಥಿ ಶಿಕ್ಷಕರ ಬಾಕಿ ವೇತನ ಕೂಡಲೆ ಬಿಡುಗಡೆ ಮಾಡುವ ಜೊತೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.

ಅಲ್ಲದೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಅಥಣಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿ ಅತಿಥಿ ಉಪನ್ಯಾಸಕ ಆರ್.ಎ.ಬಡಿಗೇರ, ರಾಜ್ಯದಲ್ಲಿರುವ 413 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ . ಇನ್ನು ನಿಖರವಾಗಿ ವಿವಿಧ ಹಂತಗಳ ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೆಷ್ಟು ಮಂದಿ ಅತಿಥಿ ಶಿಕ್ಷಕರಾಗಿ ದುಡಿಯುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಒಟ್ಟಿನಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರು ರಾಜ್ಯದೆಲ್ಲೆಡೆ ದುಡಿಯುತ್ತಿದ್ದಾರೆ. ಈಗಂತೂ ತಮ್ಮ ಕೈಯಿಂದಲೇ ಖರ್ಚನ್ನು ಭರಿಸುತ್ತಾ, ಆನ್​ಲೈನ್ ತರಗತಿಗಳನ್ನೂ ಕೂಡ ಅವರು ನಿಭಾಯಿಸುತ್ತಿದ್ದಾರೆ ಎಂದರು.

ಕೆಲವರು 20-25 ವರ್ಷಗಳಿಂದ ನಿರಂತರವಾಗಿ ಅತಿಥಿಗಳಾಗಿಯೇ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 2019ರ ಜನವರಿಯಲ್ಲಿ ಯುಜಿಸಿ ಸುತ್ತೋಲೆಯೊಂದನ್ನು ಹೊರಡಿಸಿ, ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ ರೂ 1,500 ಆಥವಾ ಮಾಸಿಕ ರೂ, 50,000 ವರೆಗೆ ವೇತನವನ್ನು ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು . ಆದರೆ ಇಂದಿಗೂ ನಮ್ಮ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ನೆಟ್, ಸೆಟ್ ಅಥವಾ ಪಿಎಚ್​​ಡಿ ಮಾಡಿರುವವರಿಗೆ ಮಾಸಿಕ ರೂ, 13,000 , ಉಳಿದವರಿಗೆ ರೂ. 11,000 ಮತ್ತು ಅತಿಥಿ ಶಿಕ್ಷಕರಿಗೆ ಮಾಸಿಕ ರೂ, 7,500 ದೊರಕುತ್ತಿದೆ ಎಂದರು.

ಬಳಿಕ ಇನ್ನೋರ್ವ ಅತಿಥಿ ಉಪನ್ಯಾಸಕ ನವನಾಥ ಹೊನಖಾಂಡೆ ಮಾತನಾಡಿ, ಲಾಕ್​ಡೌನ್ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಂಬಳವನ್ನು ನಿಲ್ಲಿಸಬಾರದು ಎಂದು ಸರ್ಕಾರವೇ ಹೇಳುತ್ತಿರುವಾಗ ಅತಿಥಿ ಉಪನ್ಯಾಸಕರನ್ನು ಈ ಹೀನಾಯ ಸ್ಥಿತಿಗೆ ದೂಡುವುದು ಎಳ್ಳಷ್ಟೂ ಸರಿಯಲ್ಲ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವೇ ಖಾಸಗಿ ವಲಯಕ್ಕೆ ಮಾದರಿಯಾಗಿರಬೇಕು. ಆದರೆ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೆ ಮಾರ್ಚ್ 24ರಿಂದ ಇಲ್ಲಿಯವರೆಗೂ ಸಂಬಳ ನೀಡಿಲ್ಲ. ಲಾಕ್​​​ಡೌನ್ ಮುಂಚಿನಿಂದಲೂ ಇವರ ಜೀವನ ಸಂಕಷ್ಟಮಯವಾಗಿತ್ತು ಎಂದರು.

ಅತಿಥಿ ಶಿಕ್ಷಕರ ಪ್ರಮುಖ ಬೇಡಿಕೆಗಳು

  • ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಬಾಕಿ ಉಳಿದಿರುವ ಎಲ್ಲಾ ವೇತನವನ್ನು ಈ ಕೂಡಲೇ ಪಾವತಿಸಿ.
  • ಎಲ್ಲಾ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಿ, ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಿ
  • ಕೊರೊನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಪರಿಹಾರ ಪ್ಯಾಕೇಜ್​​​ ಘೋಷಿಸಿ
  • ಈ ಶೈಕ್ಷಣಿಕ ವರ್ಷಕ್ಕೆ ಆರ್ಥಿಕ ಮಿತವ್ಯಯದ ನೆಪ ಹೇಳಿ ಸರ್ಕಾರವು ಅತಿಥಿ ಉಪನ್ಯಾಸಕರನ್ನು / ಅತಿಥಿ ಶಿಕ್ಷಕರನ್ನು ಮುಂದುವರೆಸದಿರುವ ಅಥವಾ ಕೈಬಿಡುವ ಮಾತನಾಡುತ್ತಿದೆ. ಇದು ಅತಿಥಿ ಉಪನ್ಯಾಸಕರನ್ನು ಇನ್ನಷ್ಟು ಹತಾಶರನ್ನಾಗಿಸಿದೆ. ಸರ್ಕಾರವು ಗಾಯದ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈಹಾಕಬಾರದು.
  • ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸುವ ಪ್ರಕ್ರಿಯೆಯನ್ನು ಕೂಡಲೆ ನಡೆಸಬೇಕು ಹಾಗೂ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details