ಅಥಣಿ: ಕೋಲಾರ ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಸರ್ಕಾರಿ ನೌಕರರ ಸಂಘದಿಂದ ಅಥಣಿ ತಹಶೀಲ್ದಾರ್ ದುಂಡಪ್ಪಾ ಕೋಮಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಅಥಣಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಮನಗೌಡ ಧರಿಗೌಡರ, ಸರ್ಕಾರಿ ನೌಕರರ ಮೇಲಿನ ಹಲ್ಲೆ ಖಂಡನೀಯ. ಜಮೀನು ವಿವಾದದ ಸರ್ವೇ ಮಾಡಿ ಬರುವಾಗ ಕೊಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ತಹಶೀಲ್ದಾರ್ ದೊಡ್ಡಕಳವಂಚಿ ಗ್ರಾಮದಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದರು. ಈ ರೀತಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳ ಮೇಲೆ ಆಗಾಗ ಹಲ್ಲೆಗಳಾಗುತ್ತಿರುವುದು ಸರಿಯಲ್ಲ. ಆದ್ದರಿಂದ ಇನ್ಮುಂದೆ ಸರ್ಕಾರಿ ಅಧಿಕಾರಿಗಳಿಗೆ ಭದ್ರತೆ ಕೊಡುವಂತೆ ಆಗ್ರಹಿಸಿದರು. ಜೊತೆಗೆ ಮೃತ ಚಂದ್ರಮೌಳೇಶ್ವರ ಕುಟುಂಬಕ್ಕೆ ಪರಿಹಾರ, ಮನೆಯವರಿಗೆ ಕೆಲಸ ಕೊಡುವಂತೆಯೂ ಸರ್ಕಾರವನ್ನು ಒತ್ತಾಯಿಸಿದರು.